ಅಂಜುಮನ್‌ ಏ ಇಸ್ಲಾಂ ಸಮಿತಿ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Dec 28, 2024 1:01 AM

ಸಾರಾಂಶ

ಸದಸ್ಯತ್ವ ನೋಂದಣಿ ಶುಲ್ಕವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಹಾಗೂ ಸರ್ಕಾರಿ ಅಧಿಕಾರಿಗಳೊಬ್ಬರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡುವ ಮೂಲಕ ಅಂಜುಮನ್ -ಏ-ಇಸ್ಲಾಂ ಸಮಿತಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಅಂಜುಮನ್ ಸದಸ್ಯರು ವಕ್ಫ್‌ ಬೋರ್ಡ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ಸದಸ್ಯತ್ವ ನೋಂದಣಿ ಶುಲ್ಕವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಹಾಗೂ ಸರ್ಕಾರಿ ಅಧಿಕಾರಿಗಳೊಬ್ಬರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡುವ ಮೂಲಕ ಅಂಜುಮನ್ -ಏ-ಇಸ್ಲಾಂ ಸಮಿತಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಅಂಜುಮನ್ ಸದಸ್ಯರು ವಕ್ಫ್‌ ಬೋರ್ಡ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅಂಜುಮನ್ -ಏ-ಇಸ್ಲಾಂ ನಿರ್ಗಮಿತ ಅಧ್ಯಕ್ಷ ಮುಕ್ತಿಯಾರ ಮುಲ್ಲಾ ಅಂಜುಮನ್ -ಏ-ಇಸ್ಲಾಂ ಸಮಿತಿ ಚುನಾವಣೆ ನಡೆಸಬೇಕಾಗಿದೆ. ಆದರೆ ಚುನಾವಣೆ ಹೊಣೆಯನ್ನು ಹೊತ್ತಿರುವ ವಕ್ಫ್ ಬೋರ್ಡ್‌ ಮಾತ್ರ ತನ್ನಿಚ್ಛೆಯಂತೆ ನಡೆದುಕೊಳ್ಳುತ್ತಿದ್ದು ಯಾವುದೇ ಚರ್ಚೆಗಳನ್ನು ನಡೆಸದೇ ಸದಸ್ಯತ್ವ ನೊಂದಣಿ ಶುಲ್ಕವನ್ನು ಪ್ರಸ್ತುತ 260ಕ್ಕೇರಿಸಿದೆ ಎಂದು ಆರೋಪಿಸಿದರು.

ಕೇವಲ 118 ಜನ ಸದಸ್ಯತ್ವ: ಪುರಸಭೆ ಹಾಗೂ ಅಂಜುಮನ್ ಸದಸ್ಯ ಮೆಹಬೂಬ ಅಗಸನಹಳ್ಳಿ ಮಾತನಾಡಿ, ಇಲ್ಲಿಯವರೆಗೂ ಸುಮಾರು 2500ಕ್ಕೂ ಜನರು ಸದಸ್ಯತ್ವ ಪಡೆದುಕೊಳ್ಳಬೇಕಾಗಿತ್ತು. ಆದರೆ ನೋಂದಣಿ ಶುಲ್ಕ ಹೆಚ್ಚಾಗಿದ್ದರಿಂದ ಕೇವಲ 118 ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರೇ ವಕ್ಫ್‌ ಬೋರ್ಡ್‌ ಸಿಇಒ ಇರುವಷ್ಟು ಸದಸ್ಯರಲ್ಲೇ ಚುನಾವಣೆ ನಡೆಸುವುದಾಗಿ ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ, ವಕ್ಫ ಬೋರ್ಡ ಅಧಿಕಾರಿಗಳ ವರ್ತನೆಯಿಂದ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.

ಅಂಜುಮನ್ ಪತ್ರಕ್ಕೆ ಬೆಲೆ ಇಲ್ಲದಂತಾಗಿದೆ: ಪುರಸಭೆ ಹಾಗೂ ಅಂಜುಮನ್ ಸದಸ್ಯ ಮಜೀದ್ ಮುಲ್ಲಾ ಮಾತನಾಡಿ, ಬ್ಯಾಡಗಿಯಲ್ಲಿರುವ ಮುಸ್ಲಿಂ ಸಮಾಜದ ಜನರು ಬಹುತೇಕರು ಕೂಲಿ ಕಾರ್ಮಿಕರಿದ್ದು ಪ್ರಸ್ತುತ ಶುಲ್ಕ ರು.260 ಹೊರೆಯಾಗುತ್ತಿದೆ, ಮನಗಂಡು ಜನರ ಅಭಿಪ್ರಾಯ ಪಡೆದು ಸದಸ್ಯತ್ವ ಶುಲ್ಕವನ್ನು ಕೇವಲ 100 ರು.ಗಳಿಗೆ ಮಿತಿಗೊಳಿಸುವಂತೆ ಅಂಜುಮನ್ -ಎ-ಇಸ್ಲಾಂ ಸಂಸ್ಥೆಯು ಲಿಖಿತ ಮನವಿ ಸಲ್ಲಿಸಿದರೂ ಉದ್ಧಟತನ ತೋರುತ್ತಿರುವ ವಕ್ಫ್ ಬೋರ್ಡ ಅಧಿಕಾರಿಗಳು ನಮ್ಮ ಪತ್ರಕ್ಕೆ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ತಟಸ್ಥ ನೀತಿ ಅನುಸರಿಸಿ: ಬಾಬುಸಾಬ್ ಬಡಿಗೇರ ಮಾತನಾಡಿ, ಕಳೆದ ಬಾರಿ ನಡೆದ ಅಂಜಮನ್ -ಎ-ಇಸ್ಲಾಂ ಚುನಾವಣೆ ವೇಳೆ ಇದೇ ವಕ್ಫ ಬೋರ್ಡನವರು ಸರ್ಕಾರಿ ಅಧಿಕಾರಿಗಳನ್ನು ನೇಮಕ ಮಾಡಿ ಪಾರದರ್ಶಕವಾಗಿ ಚುನಾವಣೆ ನಡೆಯುವಂತೆ ಮಾಡಿದ್ದರು. ಪ್ರಸ್ತುತ ಚುನಾವಣೆಯನ್ನೂ ಸಹ ಸರ್ಕಾರಿ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಪಾರದರ್ಶಕವಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.

ಕಾಲ್ಕಿತ್ತ ವಕ್ಫ ಬೋರ್ಡ ಅಧಿಕಾರಿಗಳು: ಪ್ರತಿಭಟನೆ ಕಾವು ತೀವ್ರಗೊಳ್ಳುತ್ತಿದ್ದಂತೆ ವಕ್ಫ ಬೋರ್ಡ ಅಧಿಕಾರಿಗಳಿಬ್ಬರು ಸದ್ದಿಲ್ಲದಂತೆ ಕಾಲ್ಕಿತ್ತರು, ತಮ್ಮ ಅಹವಾಲುಗಳನ್ನು ಕೇಂದ್ರ ಕಚೇರಿಗೆ ತಿಳಿಸಲಾಗುವುದು. ಅಲ್ಲಿಂದ ಮುಂದಿನ ಸೂಚನೆಗಳನ್ನು ಪಡೆದು ಅದರಂತೆ ನಡೆದುಕೊಳ್ಳುವುದಾಗಿ ತಿಳಿಸಿ ತೆರಳಿದರು. ಈ ಸಂದರ್ಭದಲ್ಲಿ ಮಂಜೂರ್ ಹಕೀಮ್, ಅಸ್ಲಂ ಮುಲ್ಲಾ, ಜಿಲಾನಿ ಶಿರಹಟ್ಟಿ, ಮಹ್ಮದಲಿ ಬ್ಯಾಡಗಿ, ಮೆಹಬೂಬ್ ದೊಡ್ಮನಿ ಸೇರಿದಂತೆ ಇನ್ನಿತರರಿದ್ದರು. ಕ್ಯಾತೆ ನಿಲ್ಲಿಸಿ ಇಲ್ಲವೇ ಚುನಾವಣೆ ಬಹಿಷ್ಕಾರ: ವಕ್ಫ ಬೋರ್ಡ್‌ ಅಧಿಕಾರಿಗಳು ನಮ್ಮ ಸಂಸ್ಥೆಯ ಮೇಲೆ ಬಿಗಿ ಹಿಡಿತ ಸಾಧಿಸುವ ಅವಶ್ಯಕತೆಯಿಲ್ಲ, 100 ರು. ಶುಲ್ಕ ನಿಗದಿಗೊಳಿಸಿ ಚುನಾವಣೆ ನಡೆಸಲಿ. ಇಲ್ಲದಿದ್ದರೇ ಸಾಮೂಹಿಕವಾಗಿ ಚುನಾವಣೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ನಜೀರ್ ಅಹ್ಮದ ಶೇಖ್ ಹೇಳಿದರು.ಪ್ರಸ್ತುತ ಚುನಾವಣಾಧಿಕಾರಿಗಳ ಕಚೇರಿಯನ್ನು ಸರ್ಕಾರಿ ಕಟ್ಟಡಗಳಲ್ಲಿ ತೆರೆಯಬೇಕು. ಸಾರ್ವಜನಿಕರಿಗೆ ತಿಳಿಯುವಂತೆ ಸದಸ್ಯತ್ವ ಅಭಿಯಾನ ನಡೆಸಬೇಕು. ಕೂಡಲೇ ಈಗಿರುವ ಕಚೇರಿ ಸ್ಥಳಾಂತರಗೊಳಿಸಬೇಕು ಪುರಸಭೆ ಸದಸ್ಯ ರಫೀಕ್ ಅಹ್ಮದ ಮುದ್ಗಲ್ ಹೇಳಿದರು.

Share this article