ಕೃಷಿ ಕ್ಷೇತ್ರದ ಅಭಿವೃದ್ಧಿಯೇ ಕೃಷಿಕ ಸಮಾಜದ ಉದ್ದೇಶ: ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ

KannadaprabhaNewsNetwork | Published : Jan 30, 2025 12:33 AM

ಸಾರಾಂಶ

ರಾಜ್ಯ ಅತ್ಯುತ್ತಮ ಹೈನುಗಾರಿಕೆ ಪ್ರಶಸ್ತಿ ವಿಜೇತೆ ತಾಲೂಕಿನ ಡಿಂಕಾ ಗ್ರಾಮದ ಮಂಗಳಮ್ಮ ಹಾಗೂ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ವಾಟಾಳ್ ನಿಂಗೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೃಷಿ ಸಚಿವ ಚಲುವರಾಯಸ್ವಾಮಿ ಆಶಯದಂತೆ, ರಾಜ್ಯದ ರೈತರ ಶ್ರೇಯೋಭಿವೃದ್ಧಿಗಾಗಿ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕೃಷಿಕ ಸಮಾಜದ ಸ್ವಂತ ಕಟ್ಟಡ ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಎಸ್.ಆರ್.ಮಂಜುನಾಥ್ ಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೃಷಿಕ ಸಮಾಜದ ತಾಲೂಕು ನೂತನ ಅಧ್ಯಕ್ಷ ಕೆನ್ನಾಳು ಕೆ.ಎನ್.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ, ಜಿಲ್ಲಾಧ್ಯಕ್ಷ ಚಾಮಲಾಪುರ ನಾಗರಾಜ್ ಹಾಗೂ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾತನಾಡಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜವು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೃಷಿ ಸೇರಿ ವಿವಿಧ ಇಲಾಖೆ ಮೂಲಕ ರೈತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದೆ. ಈ ಕೃಷಿಕ ಸಮಾಜಕ್ಕೆ ಸ್ವಂತ ನಿವೇಶನ ಹಾಗೂ ಸ್ವಂತ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಲಾಗುತ್ತಿದೆ. ಹಾಗಾಗಿ ಆಯಾಯ ತಾಲೂಕುಗಳಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಿವೇಶನ ಪಡೆಯಲು ಗಮನಹರಿಸಬೇಕು ಎಂದರು.

ಶಾಸಕರ ಜೊತೆ ಚರ್ಚೆ

ಶಾಸಕ ದರ್ಶನ್ ಪುಟ್ಟಣ್ಣಯ್ಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರೈತರ ಬದುಕು ಹಸನಾಗಲು ಜನಪ್ರತಿನಿಧಿಗಳು, ಅಧಿಕಾರಿಗಳು, ಕೃಷಿಕ ಸಮಾಜ ಹೇಗೆ ಸೇವೆ ಸಲ್ಲಿಸಬಹುದು ಎಂದು ಚರ್ಚಿಸಿದರು. ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಜೊತೆ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಿದರು. ತಾಲೂಕು ಕೃಷಿಕ ಸಮಾಜಕ್ಕೆ ನಿವೇಶನ ನೀಡಬೇಕೆಂದು ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ಅಧ್ಯಕ್ಷ ಕೆನ್ನಾಳು ಚಂದ್ರಶೇಖರ್ ಮನವಿ ಸಲ್ಲಿಸಿದರು.

ಸಾಧಕರಿಗೆ ಸನ್ಮಾನ:

ರಾಜ್ಯ ಅತ್ಯುತ್ತಮ ಹೈನುಗಾರಿಕೆ ಪ್ರಶಸ್ತಿ ವಿಜೇತೆ ತಾಲೂಕಿನ ಡಿಂಕಾ ಗ್ರಾಮದ ಮಂಗಳಮ್ಮ ಹಾಗೂ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ವಾಟಾಳ್ ನಿಂಗೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಪಾಂಡವಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆನ್ನಾಳು ಚಂದ್ರಶೇಖರ್, ಜಿಲ್ಲಾಧ್ಯಕ್ಷ ಚಾಮಲಾಪುರ ನಾಗರಾಜ್, ತಾಲೂಕು ಪದಾಧಿಕಾರಿಗಳಾದ ಉಪಾಧ್ಯಕ್ಷ ಮೋಹನ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಖಜಾಂಚಿ ಡಿಂಕಾ ಪುಟ್ಟರಾಜು, ಮಾಜಿ ಅಧ್ಯಕ್ಷ ಚನ್ನಕೇಶವ, ಶ್ಯಾದನಹಳ್ಳಿ ನರೇಂದ್ರಬಾಬು, ಮಹದೇಶ್ವಪುರ ದೇವರಾಜು, ಎನ್.ಟಿ.ಪುಟ್ಟಸ್ವಾಮಿ, ಅಶ್ವತ್ ಕುಮಾರಗೌಡ, ನ್ಯಾಮನಹಳ್ಳಿ ಉಮೇಶ್, ದೇವರಹಳ್ಳಿ ದೇವೇಗೌಡ ಸೇರಿ ಪದಾಧಿಕಾರಿಗಳಿದ್ದರು.

Share this article