ಕೊಡಗಿನ ಮಳೆಬೆಳೆಗಳ ವರದಾತ ಎಂದು ಖ್ಯಾತಿಪಡೆದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ ಮಾ. 2 ರಂದು ನಡೆಯಲಿದೆ.
ಈ ಪ್ರಯುಕ್ತ 17 ರಂದು ಅಮಾವಾಸ್ಯೆಯ ದಿನ ಅಪರಾಹ್ನ ಆದಿಸ್ಥಾನ ಮಲ್ಮದಲ್ಲಿ ಸಂಪ್ರದಾಯದಂತೆ ದೇವರ ಕಟ್ಟುಬೀಳಲಿದೆ. ಹಬ್ಬ ಸಂಪನ್ನವಾಗುವ, ತನಕ ದೇವಾಲಯದಲ್ಲಿ ಯಾವುದೇತುಲಾಭಾರ ಸೇವೆ, ನಾಮಕರಣ, ವಿಶೇಷ ಪೂಜೆಗಳು ನಡೆಯುವುದಿಲ್ಲ ಎಂದು ತಕ್ಕಮುಖ್ಯಸ್ಥ ರು ಹಾಗೂ ಭಕ್ತಜನ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.ಮಾ.2ರಂದು ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರು ಹಾಗೂ ಬಟ್ಯತ್ ವಕ್ಕ ಪೇರಿಯಂಡ ಕುಟುಂಬಸ್ಥರ ಹಾಗೂ ಸಂಬಂಧಪಪಟ್ಟ ಇತರ ಕುಟುಂಬಸ್ಥರ ಐನ್ಮನೆಗಳಿಂದ ಜೋಡೆತ್ತು ಪೋರಾಟ, ಪಾಲ್ ಬೈಯ್ಯಾಡ್ ನೊಂದಿಗೆ ಶಾಸ್ತ್ರೋಕ್ತ ವಾಗಿ ಬಂದು ದೇವಾಲಯ ತಲುಪುವುದರೊಂದಿಗೆ ಕಲಾಡ್ಚ ಹಬ್ಬ ಪ್ರಾರಂಭವಾಗಲಿದೆ. ಮಧ್ಯಾಹ್ನ ನಿತ್ಯ ಪೂಜೆಯೊಂದಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ.ನಂತರ ಚಂಡೆ ಮದ್ದಳೆಯೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಆದಿಸ್ಥಾನ ಮಲ್ಮಗೆ ಕೊಂಡೊಯ್ಯುವರು. ಅಲ್ಲಿ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್ ನೊಂದಿಗೆ ಪಾಡಿ, ನೆಲಜಿ, ಪೇರೂರಿನ ತಕ್ಕ ಮುಖ್ಯಸ್ಥರು ಕೂಡಿ ಎತ್ತ್ ಪೋರಾಟ ಸೇವೆ, ಪಾಲ್ ಬೈಯ್ಯಾಡ್ ನ ಪಾಯಸಮಾಡಿ ಪ್ರಸಾದವಾಗಿ ಅರ್ಪಿಸುವರು. ಮುಸ್ಸಂಜೆ ವೇಳೆಗೆ ವಿವಿಧ ಪೂಜಾ ಕೈಂಕರ್ಯದೊಂದಿಗೆ ದೇವಕಟ್ಟು ಕೊನೆಗೊಳಿಸಿ, ಉತ್ಸವಮೂರ್ತಿಯನ್ನು ಪಾಡಿ ದೇವಾಲಯಕ್ಕೆ ತಂದು ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ಆಕರ್ಷಕ ಆರಾಟ್ ಬೊಳಕ್ ನೃತ್ಯದೊಂದಿಗೆ ಉತ್ಸವಕ್ಕೆ ತೆರೆಬೀಳುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ದೇವರಕೃಪೆಗೆ ಪಾತ್ರರಾಗ ಬೇಕೆಂದು ದೇವಾಲಯದ ಭಕ್ತಜನಸಂಘದ ಪದಾಧಿಕಾರಿಗಳು, ದೇವತಕ್ಕರು ಹಾಗೂ ತಕ್ಕ ಮುಖ್ಯಸ್ಥರು ಕೋರಿದ್ದಾರೆ.