ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳನ್ನು ಈ ಸರ್ಕಾರ ಸೃಷ್ಟಿಸಿದೆ. ಸಂಭ್ರಮಪಡುವಂಥ ಕೆಲಸ ಏನು ಮಾಡಿದ್ದೀರಿ? ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯದೆ ಆಡಳಿತ ವ್ಯವಸ್ಥೆಯೇ ನೆಲಕಚ್ಚಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕಾಗಿ ಸಂಭ್ರಮಾಚರಣೆ ಮಾಡ್ತಿದ್ದೀರಾ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಮಸ್ಯೆ ಬಗೆಹರಿಸುವುದಕ್ಕಿಂತ ಕುರ್ಚಿ ಸಮಸ್ಯೆಯೇ ಮುಖ್ಯವಾಗಿದೆ. ಕರ್ನಾಟಕದಲ್ಲಿ ಒಂದಾದರೂ ಶಾಶ್ವತವಾದ ಯಾವ ಯೋಜನೆ ಮಾಡಿದ್ದೀರಿ? ಏನನ್ನೂ ಮಾಡದೆ ಯಾವುದಕ್ಕಾಗಿ ಸಂಭ್ರಮಿಸುತ್ತಿದ್ದೀರಿ? ಜನರ ಜೇಬಿಗೆ ಕತ್ತರಿ ಹಾಕಿದ್ದೀರಿ. ಹಾಲಿನಿಂದ ಆಲ್ಕೋಹಾಲ್‌ವರೆಗೆ ದರ ಏರಿಸಿದ್ದೀರಿ. ರೈತರು ಬಳಸುವ ಬಿತ್ತನೆ ಬೀಜದ ದರವೂ ಏರಿಕೆಯಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ಯ ಸರ್ಕಾರ ಏರಿಸದೇ ಇರುವ ವಸ್ತುಗಳೇ ಇಲ್ಲ ಎಂದು ಸಿಟಿ ರವಿ ಆಕ್ಷೇಪಿಸಿದರು.
ಸಂಭ್ರಮಿಸೋದು ವಿಕೃತ ಮನಸ್ಥಿತಿ:ಒಂದು ಸಾವಿರ ದಿನಗಳ ಆಡಳಿತದಲ್ಲಿ ನಿಮ್ಮ ಸಾಧನೆ ಏನು? ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದ ಸಾಲ ಏರಿಕೆಯಾಗಿದೆ. ಜನರು ಸಂಕಟಪಡುತ್ತಿದ್ದರೆ ನೀವು ಸಂಭ್ರಮಪಡೋದು ವಿಕೃತ ಮನಸ್ಥಿತಿಯ ಪರಮಾವಧಿ ಎಂದ ಅವರು, ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಸರ್ಕಾರಕ್ಕೆ ಪ್ರಖ್ಯಾತಿ ತರುವ ಒಂದೇ ಒಂದು ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ರಾಜ್ಯದ ಬಿಜೆಪಿ ಆಡಳಿತವಿದ್ದಾಗಲೂ ಗುತ್ತಿಗೆದಾರರಿಂದ ಭ್ರಷ್ಟಾಚಾರ ಆರೋಪ, ಅಧಿಕಾರ ಹಂಚಿಕೆ ಕುರಿತಂತೆ ವಿವಾದ ಆಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸರಕಾರದಲ್ಲಿರುವ ಇದ್ದ ಭ್ರಷ್ಟಾಚಾರ ಸಾಬೀತಾಗಿಲ್ಲ ಎಂದರು.
- ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ