- ಕಾಂಗ್ರೆಸ್ ಸರ್ಕಾರ ವಿರುದ್ಧ ವಿಪ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ
- ಸ್ವಸಂಕಷ್ಟಗಳಿಂದಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಜನರೆದುರು ಮುಜುಗರ
- ಧಾರವಾಡ ಹೋರಾಟಕ್ಕಿಂತ ಮುಂಚೆ ಯಾಕೆ ನೇಮಕಾತಿ ಮಾಡಲಿಲ್ಲ?- - -
ಮೀಸಲಾತಿ, ಒಳ ಮೀಸಲಾತಿ, ಉದ್ಯೋಗ, ಶಿಕ್ಷಣ, ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ಹಿಂದೆ ಬಿದ್ದಿದ್ದೆ. ತನ್ನದೇ ತಪ್ಪುಗಳಿಂದ ಈ ಸರ್ಕಾರ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಂಡು ಜನರ ಮುಂದೆ ಮುಜುಗರಕ್ಕೆ ಈಡಾಗುತ್ತಿದೆ ಎಂದು ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.
ಧಾರವಾಡದಲ್ಲಿ ವಿದ್ಯಾರ್ಥಿ, ಯುವಜನರು ಸರ್ಕಾರಿ ಹುದ್ದೆಗಳ ಭರ್ತಿಗಾಗಿ ತೀವ್ರ ಸ್ವರೂಪದ ಹೋರಾಟ ನಡೆಸಿದ್ದಾರೆ. ಅಲ್ಲಿನ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ವಿಪಕ್ಷ ನಾಯಕರಾದ ಆರ್.ಅಶೋಕ ಹಾಗೂ ತಾವು ಸೇರಿದಂತೆ ಅನೇಕರು ಯುವಜನರ ಪರ ಹೋರಾಟ ನಡೆಸಿದ್ದೆವು. ಈ ಹೋರಾಟದ ಪ್ರತಿಫಲವಾಗಿ ಈಗ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿದೆ ಎಂದು ತಿಳಿಸಿದರು.
ಒಳಮೀಸಲಾತಿ ಹೆಸರಿನಲ್ಲಿ ಹುದ್ದೆಗಳನ್ನು ಇಲ್ಲಿವರೆಗೆ ಭರ್ತಿ ಮಾಡದೇ, ಕಾಲಹರಣ ಮಾಡಿದ್ದಾರೆ. ರಾಜ್ಯದಲ್ಲಿ 2.37 ಲಕ್ಷ ಹುದ್ದೆಗಳು ಖಾಲಿ ಇವೆ. ನಿರುದ್ಯೋಗಿಗಳಿಗಾಗಿ ಯುವನಿಧಿ ಅನ್ನುತ್ತೀರಿ. ಆದರೆ, ನಿರುದ್ಯೋಗಿ ಭತ್ಯೆಯನ್ನೇ ನೀಡುತ್ತಿಲ್ಲ ಎಂದು ಟೀಕಿಸಿದರು.
- - -
* ಪರಿಶಿಷ್ಟರ ₹39 ಸಾವಿರ ಕೋಟಿ ಗ್ಯಾರಂಟಿಗೆ ಬಳಕೆ: ಆರೋಪ
ಗೃಹಲಕ್ಷ್ಮಿ ₹5 ಸಾವಿರ ಹಣ ಎಲ್ಲಿಗೆ ಹೋಯಿತು? ಗೃಹಲಕ್ಷ್ಮಿಗೆ ಆ ಹಣ ಹೋಯಿತಾ ಅಥವಾ ಬೇರೆ ಲಕ್ಷ್ಮಿಗೆ ಹೋಯಿತಾ? ಈ ಬಗ್ಗೆ ಲೆಕ್ಕ ಕೊಡುವುದಕ್ಕೆ ಸರ್ಕಾರ ಸುತಾರಾಂ ಸಿದ್ದವಿಲ್ಲ. ದಲಿತರನ್ನೂ ಕಾಂಗ್ರೆಸ್ ಸರ್ಕಾರ ವಂಚಿಸಿದೆ. ಎಸ್‌ಸಿಪಿ- ಟಿಎಸ್‌ಪಿ ಯೋಜನೆಯಜಿ ಮೀಸಲಿಟ್ಟ ₹39 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಸಿದ್ದರಾಮಯ್ಯಗೆ ಈ ಬಗ್ಗೆ ಪ್ರಶ್ನಿಸಿದರೆ, ನನಗೆ ಅರ್ಥ ಆಗಲ್ಲ ಎನ್ನುತ್ತಾರೆ. ಗ್ಯಾರಂಟಿ ಹಣ, ಪರಿಶಿಷ್ಟರ ಕಲ್ಯಾಣಕ್ಕೆ ಬಳಸಬೇಕಾದ ಹಣ ಎಲ್ಲಿ ಹೋಯಿತು ಎಂಬುದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿಗೆ ಕಾನೂನು ತಂದರು. ಅದನ್ನು ಎಲ್ಲರೂ ಒಪ್ಪಿದ್ದೇವೆ. ತಾರತಮ್ಯ ಪರಿಹರಿಸದೇ, ಒಳ ಮೀಸಲಾತಿಯಲ್ಲೇ ಎ, ಬಿ, ಸಿ ಗ್ರೂಪ್ ಅಂತಾ ಗುಂಪುಗಳ ಮಾಡಿ, ತರಾತುರಿಯಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಹೇರಿ, ಎಸ್‌ಸಿ ಒಳ ಮೀಸಲಾತಿ ಮಸೂದೆಗೆ ಅಂಕಿತ ಹಾಕಿಸಿದಿರಿ. ಒಳ ಮೀಸಲಾತಿ ಇರುವುದೇ ಶೇ.17ಕ್ಕೆ ಮಾತ್ರ. ಆದರೆ, ಕೋರ್ಟ್ ಆದೇಶದ ಪ್ರಕಾರ ಶೇ.17ರಷ್ಟು ಮೀಸಲು ಕೊಡುವುದಕ್ಕೆ ಬರುವುದಿಲ್ಲ. ಹಾಗಾದರೆ, ಯಾವ ಆಧಾರದಲ್ಲಿ ಒಳ ಮೀಸಲಾತಿ ಕೊಡುತ್ತೀರಿ? ಇದು ಪರಿಶಿಷ್ಟರಿಗೆ ನೀಡು ಮಾಡುವ ಅನ್ಯಾಯ, ಮೋಸ ಅಲ್ಲವೇ ಎಂದು ಪ್ರಶ್ನಿಸಿದರು.- - -
(ಬಾಕ್ಸ್-2)* ಸಿದ್ದು ಸರ್ಕಾರದಿಂದ ಸಾಮಾಜಿಕ ಅನ್ಯಾಯ ಸಿದ್ದರಾಮಯ್ಯ ಸರ್ಕಾರಕ್ಕೆ ಸಾಮಾಜಿಕ ನ್ಯಾಯ ಕೊಡಲಾಗುತ್ತಿಲ್ಲ. ಈ ಸರ್ಕಾರ ಸಾಮಾಜಿಕ ಅನ್ಯಾಯ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿ, ನಲುಗುತ್ತಿದೆ. ಕಾನೂನು ತಂದು ಯಾರಿಗೆ ಉಪಯೋಗ ಆಯ್ತು ಅಂತಾ ಉತ್ತರಿಸಿ. 3 ವರ್ಷ ನೀವು ವ್ಯರ್ಥ ಕಾಲಹರಣ ಮಾಡಿದಿರೆ ಹೊರತು ಉದ್ಯೋಗ ಭರ್ತಿ ಮಾಡಲಿಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.
ಧಾರವಾಡದಲ್ಲಿ ಯುವಕರು ರಸ್ತೆಯಲ್ಲಿ ನಿಂತು ಕಣ್ಣೀರಿಡುತ್ತಿದ್ದಾರೆ. ಮಾದಿಗರಿಗೂ ಒಳ ಮೀಸಲಾತಿಯಲ್ಲಿ ಅನ್ಯಾಯವಾಯಿತು. ಅಲೆಮಾರಿಗಳಿಗೂ ನಿಮ್ಮ ಸರ್ಕಾರ ನ್ಯಾಯ ಕೊಡಲಿಲ್ಲ. ದಲಿತ ಬಲ ಸಮುದಾಯ ಬೀದಿಗಿಳಿದು ನಿಮ್ಮ ಸರ್ಕಾರದ ವಿರುದ್ಧ ಹೋರಾಟ ನಡೆಸಿದೆ ಎಂದು ಅವರು ಕುಟುಕಿದರು.- - -
(ಟಾಪ್ ಕೋಟ್)ರಾಜ್ಯ, ರಾಷ್ಟ್ರವನ್ನು ಕಾಂಗ್ರೆಸ್ ಸರ್ಕಾರ ಸುದೀರ್ಘ ಅವಧಿಗೆ ಆಳಿದೆ. ಬಿಜೆಪಿ ಎಷ್ಟು ವರ್ಷ ಆಳಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಉಭಯ ಸರ್ಕಾರಗಳ ಅವಧಿಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದ್ದವು, ಯಾವ ಸರ್ಕಾರದಲ್ಲಿ ಎಷ್ಟು ನೇಮಕಾತಿ ನಡೆದವೆಂಬ ಬಗ್ಗೆ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ. ನಮ್ಮ ಅವಧಿಯಲ್ಲಿ ಅವಕಾಶ ಇದ್ದಾಗಲೆಲ್ಲಾ ನೇಮಕಾತಿ ಮಾಡಿ, ಖಾಲಿ ಹುದ್ದೆ ಸಾಧ್ಯವಾದಷ್ಟು ತುಂಬುತ್ತಾ ಬಂದೆವು.
- ಛಲವಾದಿ ನಾರಾಯಣ ಸ್ವಾಮಿ, ವಿಪಕ್ಷ ನಾಯಕ, ವಿಧಾನ ಪರಿಷತ್.- - -
-27ಕೆಡಿವಿಜಿ1:ದಾವಣಗೆರೆಯಲ್ಲಿ ಶುಕ್ರವಾರ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.