ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಭೀಕರ ಮಳೆ ಹಾಗೂ ಸೆಪ್ಟೆಂಬರ್ ಕೊನೆಯ ವಾರದಲ್ಲಿನ ಪ್ರವಾಹಕ್ಕೆ ಉತ್ತರದ ಭಾಗವೇ ತತ್ತರಗೊಂಡಿದೆ. ಅದರಲ್ಲೂ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಹರಿಯುವ ಭೀಮಾನದಿ ಪ್ರವಾಹ ವಿಜಯಪುರ ಜಿಲ್ಲೆಯ ಜನರಿಗೆ ಬರೆ ಎಳೆದಿದೆ. ಜಿಲ್ಲೆಯಲ್ಲಿ ಭೀಮಾನದಿ ಆರ್ಭಟ ಎಲ್ಲೆ ಮೀರಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿವೆ. ನೂರಾರು ಕುಟುಂಬಗಳು ನೆಲೆ ಕಳೆದುಕೊಂಡಿದ್ದು, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಮುಳುಗಡೆಯಾಗಿವೆ.2020 ಅಕ್ಟೋಬರ್‌ನಲ್ಲಿ ಮುನಿದಿದ್ದ ಭೀಮೆ ಈ ಬಾರಿ ಮತ್ತೇ ಕೋಪಗೊಂಡಿದ್ದಾಳೆ. ನೆರೆಯ ಮಹಾರಾಷ್ಟ್ರದ ಉಜನಿ, ವೀರ ಜಲಾಶಯಗಳಿಂದ ಮೂರೂವರೆ ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಭೀಮೆ ಉಕ್ಕಿದ್ದಾಳೆ. 2020 ರಲ್ಲಿಯೂ ಭಿಮಾನದಿಯ ಪ್ರವಾಹದಿಂದ ಇಂಡಿ, ಆಲಮೇಲ ತಾಲೂಕಿನ ಹಲವಾರು ಗ್ರಾಮಗಳು ಜಲಾವೃತವಾಗಿ ನೂರಾರು ಕುಟುಂಬಗಳು ಸಂತ್ರಸ್ತರಾಗಿ ಸಂಕಷ್ಟ ಅನುಭವಿಸಿದ್ದರು.
ಹಲವು ಗ್ರಾಮಗಳಲ್ಲಿ ಪ್ರವಾಹ:ಇಂಡಿ ತಾಲೂಕಿನ ಅರ್ಜುಣಗಿ ಬಿಕೆ. ಬರಗುಡಿ, ಚಿಕ್ಕಮಣೂರ, ಹಿಂಗಣಿ, ಖೇಡಗಿ, ರೂಡಗಿ ಹಾಗೂ ಪಡನೂರ ಗ್ರಾಮಗಳಲ್ಲಿ ಪ್ರವಾಹ ತಲೆದೋರಿದೆ. ಇತ್ತ ಆಲಮೇಲ ತಾಲೂಕಿನ ಕುಮಸಗಿ, ತಾರಾಪೂರ, ಕಡ್ಲೆವಾಡ, ಶಂಬೇವಾಡ, ದೇವಣಗಾಂವ, ತಾವರಖೇಡ ಗ್ರಾಮಗಳು ಪ್ರವಾಹದಿಂದ ತತ್ತರವಾಗಿವೆ. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಸಿಂದಗಿ ಆಲಮೇಲ- ಕಡ್ಲೆವಾಡ- ಶಂಬೇವಾಡ ಗ್ರಾಮಗಳ ಸಂಪರ್ಕ ರಸ್ತೆ ಜಲಾವೃತವಾಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿನ ಮಕ್ಕಳು, ಗರ್ಭಿಣಿಯರು, ವೃದ್ಧರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ನೂರಾರು ಹೆಕ್ಟೇರ್ ಬೆಳೆಹಾನಿ:ಭೀಮೆಯ ಪ್ರವಾಹದ ಆಕ್ರೋಶಕ್ಕೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಪ್ರಾಥಮಿಕ ಸಮೀಕ್ಷೆ ಪ್ರಕಾರ 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, ಈರುಳ್ಳಿ, ತೊಗರಿ, ಉದ್ದು, ಕಬ್ಬು ಸೇರಿದಂತೆ ತೋಟಗಾರಿಕೆ ಹಾಗೂ ಮಳೆಯಾಶ್ರಿತ ಬೆಳೆಗಳು ಪ್ರವಾಹದಲ್ಲಿ ಮುಳುಗಿ ಹೋಗಿವೆ. ಸೆಪ್ಟೆಂಬರ್ ಮಳೆಯಿಂದ 1,31,490 ಹೆಕ್ಟರ್ ಕೃಷಿ ಬೆಳೆ ಹಾನಿ ಹಾಗೂ 6,749 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸೇರಿ ಒಟ್ಟು 1,38,239 ಹೆಕ್ಟೇರ್ ಬೆಳೆ ಹಾನಿಯ ಪ್ರಾಥಮಿಕ ವರದಿ ಸಲ್ಲಿಸಿದ್ದು, ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ.
ಜನಜೀವನ ತತ್ತರ:ಇಂಡಿ, ಆಲಮೇಲ ತಾಲೂಕಿನಲ್ಲಿ ಒಟ್ಟು 17 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 185 ಕುಟುಂಬಗಳ 860 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ 2025 ಏಪ್ರಿಲ್‌ನಿಂದ ಇದುವರೆಗೂ ಸೇರಿ ಒಟ್ಟು 10 ಮಾನವ ಜೀವ ಹಾನಿಯಾಗಿದ್ದು, ಕುಟುಂಬಸ್ಥರಿಗೆ ತಲಾ ₹5ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಅಲ್ಲದೇ ಒಟ್ಟು 69 ಜಾನುವಾರುಗಳ ಜೀವಹಾನಿಗೆ ಪರಿಹಾರ ಧನ ವಿತರಿಸಲಾಗಿದೆ.
ಸಮಯ ವ್ಯರ್ಥ ಮಾಡದ ಸಚಿವರು:ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ಅರಿತ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಭಾನುವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಿ ಅಲ್ಲಿಂದ ಬಂದು ಜಿಲ್ಲೆಯ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವರು, ಸಮಯ ವ್ಯರ್ಥ ಮಾಡದೆ, ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸುವಾಗ ಕಾರಿನಲ್ಲೇ ಚಪಾತಿ ಶೇಂಗಾ ಚಟ್ನಿ ಸೇವಿಸಿ ಮುಂದಿನ ಊರಿಗೆ ನಡೆದಿದ್ದಾರೆ. ಸಚಿವರು ತಮ್ಮ ಬುತ್ತಿಯಲ್ಲಿದ್ದ ಚಪಾತಿ ಮತ್ತು ಶೇಂಗಾ ಚಟ್ನಿಯ ಸರಳ ಆಹಾರ ಸೇವಿಸಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿ ಬೆಳೆ ಭೀಮಾನದಿ ಪ್ರವಾಹದಿಂದಾಗಿ ಎಲ್ಲವೂ ಮುಳುಗಡೆಯಾಗಿ, ಕೊಳೆತಿದೆ. ಸಾಲಸೋಲ ಮಾಡಿ ಬೆಳೆದ ಬೆಳೆ ಕೈಕೊಟ್ಟಿದ್ದರಿಂದ ದಿಕ್ಕು ತೋಚದಂತಾಗಿದೆ. ಸರ್ಕಾರ ನಮಗೆ ಹೆಚ್ಚಿನ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ. ಬಸಪ್ಪ ಪೂಜಾರಿ, ಈರುಳ್ಳಿ ಬೆಳೆ ಹಾನಿಗೊಳಗಾದ ರೈತ.ಜಿಲ್ಲೆಯ ಆಲಮೇಲ ಹಾಗೂ ಇಂಡಿ ತಾಲೂಕಿನಲ್ಲಿ ಪ್ರವಾಹಕ್ಕೊಳಗಾದ ಗ್ರಾಮಗಳಿಗೆ ಹಾಗೂ ರೈತರ ಜಮೀನುಗಳಿಗೆ ಭೇಟಿನೀಡಿ ಪರಿಶೀಲಿಸಿದ್ದೇನೆ. ಜೊತೆಗೆ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ, ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದು, ಸರ್ಕಾರದ ಗಮನಕ್ಕೂ ತಂದು ತುರ್ತು ಪರಿಹಾರ ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ.