ಕನ್ನಡಪ್ರಭ ವಾರ್ತೆ ಭದ್ರಾವತಿ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಬಸವಣ್ಣನವರ ಜಯಂತ್ಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಶ್ರೀಗಳು ಆಶೀವರ್ಚನ ನೀಡಿದರು.
ದೇವರು ಬೇರೆ ಎಲ್ಲಿಯೂ ಇಲ್ಲ. ಯಾರಿಗೂ ದೇವರನ್ನು ಹುಡುಕುವ ಅವಶ್ಯಕತೆ ಇಲ್ಲ. ದೇವರು ನಮ್ಮಲ್ಲಿಯೇ ಇದ್ದು, ನಾವು ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆಂದು ಶರಣರು ೧೨ನೇ ಶತಮಾನದಲ್ಲಿಯೇ ತಿಳಿಸಿಕೊಟ್ಟಿದ್ದಾರೆ. ಇದನ್ನು ನಾವುಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂದು ಸಮಾಜದಲ್ಲಿ ಮೂಢನಂಬಿಕೆಗಳು, ಅಜ್ಞಾನಗಳು ಹಾಗು ಮೌಢ್ಯಗಳು ಹೆಚ್ಚಾಗುತ್ತಿದ್ದು, ಇದರಿಂದ ಹೊರಬರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು..ಈ ಹಿಂದೆ ಸಮಾಜದಲ್ಲಿ ಕಂಡು ಬರುತ್ತಿದ್ದ ಕಾಯಕಗಳು ಪ್ರಸ್ತುತ ಜಾತಿಗಳಾಗಿ ಸಮಾಜದಲ್ಲಿ ವಿಜೃಂಭಿಸಿ ಭೇದಭಾವ ಉಂಟುಮಾಡಿ ವಿಘಟನೆಗಳಿಗೆ ಮುಖ್ಯ ಕಾರಣವಾಗಿವೆ. ಇದರ ಪರಿಣಾಮ ಇಂದು ಎಲ್ಲಿ ನೋಡಿದರೂ ಅಶಾಂತಿ, ಸಂಘರ್ಷದ ವಾತಾವರಣ ಉಂಟಾಗಿ ನೆಮ್ಮದಿ ಜೀವನ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೇಶ್ವರ್, ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಬದುಕು ಆದರ್ಶಪ್ರಾಯವಾಗಿದೆ. ಬಸವಣ್ಣನವರ ಕುರಿತು ವಿಚಾರಧಾರೆಗಳು ನಿರಂತರವಾಗಿ ಎಲ್ಲೆಡೆ ತಲುಪುವಂತಾಗಲಿ. ಆ ಮೂಲಕ ಭವಿಷ್ಯದ ಸಮಾಜ ರೂಪುಗೊಳ್ಳಬೇಕೆಂದರು.
ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿಶೇಷವಾಗಿ ಡಾ.ಧನಂಜಯ ಸರ್ಜಿ ಹಾಗು ಬಲ್ಕೀಶ್ ಬಾನುರವರನ್ನು ಸನ್ಮಾನಿಸಿ ಗೌರವಿಸಲಾಯಿತು.