ಮೇಯರ್‌ ಮೀಸಲು ಬದಲಿಗೆ ಸಲ್ಲಿಸಿದ್ದ ಅರ್ಜಿ ಹಿಂದೆ ಪಡೆದ ಮೆಣಸಿನಕಾಯಿ

KannadaprabhaNewsNetwork |  
Published : Jun 21, 2025, 12:49 AM IST
ದದದದದ | Kannada Prabha

ಸಾರಾಂಶ

ಪಾಲಿಕೆಯ 3ನೆಯ ಅವಧಿಗೆ ಮೇಯರ್ ಆಗಿರುವ ರಾಮಪ್ಪ ಬಡಿಗೇರ ಅವರ ಅಧಿಕಾರ ಅವಧಿ ಜೂ. 28ಕ್ಕೆ ಮುಕ್ತಾಯ

ವಿಶೇಷ ವರದಿ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಸ್ಥಾನದ ಚುನಾವಣಾ ಪ್ರಕ್ರಿಯೆ ತಡೆಗೆ ಸಲ್ಲಿಕೆಯಾಗಿದ್ದ ಅರ್ಜಿ ಹಿಂಪಡೆದಿದ್ದರಿಂದ ಮೇಯರ್‌ಗಿರಿ ಆಕಾಂಕ್ಷಿಗಳಲ್ಲಿ ಮತ್ತೆ ಚಟುವಟಿಕೆ ಗರಿಗೆದರಿವೆ.

ಪಾಲಿಕೆಯ 3ನೆಯ ಅವಧಿಗೆ ಮೇಯರ್ ಆಗಿರುವ ರಾಮಪ್ಪ ಬಡಿಗೇರ ಅವರ ಅಧಿಕಾರ ಅವಧಿ ಜೂ. 28ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ನಾಲ್ಕನೆಯ ಅವಧಿಯ ಮೇಯರ್- ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಯನ್ನು ಪ್ರಾದೇಶಿಕ ಆಯುಕ್ತರು ಮಾಡಬೇಕಿತ್ತು. ಆದರೆ ಅದರ ನಡುವೆಯೇ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಹೈಕೋರ್ಟ್‌ ಮೊರೆ ಹೋಗಿ ಮೀಸಲಾತಿ ಬದಲಿಸುವಂತೆ ಕೋರಿದ್ದರು.

ನಾಲ್ಕನೆಯ ಅವಧಿಯ ಮೇಯರ್-ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್-ಒಬಿಸಿ ಸಾಮಾನ್ಯಕ್ಕೆ ಮೀಸಲಾಗಿದೆ. ಮೇಯರ್‌ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಬೇಕಿತ್ತು. ಪ್ರತಿ ಸಲವೂ ಸಾಮಾನ್ಯಕ್ಕೆ ಕನಿಷ್ಠ 2 ಸಲವಾದರೂ ಮೀಸಲಾಗುತ್ತಿತ್ತು. ಆದರೆ ಈ ಸಲ ಬರೀ ಒಂದೇ ಸಲ ಸಾಮಾನ್ಯಕ್ಕೆ ಮೀಸಲಾಗಿದೆ. ಸಾಮಾನ್ಯ ಮಹಿಳೆ ಮೀಸಲು ಬದಲಿಸಿ ಸಾಮಾನ್ಯಕ್ಕೆ ನೀಡಬೇಕು ಎಂದು ಕೋರಿ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್‌ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿತ್ತು.

ಇದಾಗಿ ಒಂದು ವಾರವೇ ಆಗಿದೆ. ಅಷ್ಟರೊಳಗೆ ಅರ್ಜಿ ಸಲ್ಲಿಸಿದ್ದ ಶಿವು ಮೆಣಸಿನಕಾಯಿ ಅವರೇ ತಮ್ಮ ಅರ್ಜಿ ಹಿಂಪಡೆದಿದ್ದಾರೆ. ಹೀಗಾಗಿ ಹೈಕೋರ್ಟ್‌ ಅರ್ಜಿ ವಿಲೇವಾರಿ ಮಾಡಿದೆ.

ಸುಮ್ಮನೆ ಮತ್ತೆ ವಿಚಾರಣೆಯಾಗಿ ಮೀಸಲಾತಿ ಬದಲಾಗಬೇಕೆಂದರೆ ಸಮಯ ಹಿಡಿಯುತ್ತದೆ. ಮೇಯರ್‌ಗಿರಿ ಸಮಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಹಿಂಪಡೆದಿದ್ದೇನೆ ಎಂದು ಶಿವು ಮೆಣಸಿನಕಾಯಿ ತಿಳಿಸುತ್ತಾರೆ.

ಗರಿಗೆದರಿದ ರಾಜಕೀಯ:

ಇದರಿಂದಾಗಿ ಇದೀಗ ಮತ್ತೆ ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯಲ್ಲಿ ಮೇಯರ್‌ ಗಿರಿಯನ್ನು ಒಂದು ಸಲ ಧಾರವಾಡಕ್ಕೆ ಕೊಟ್ಟರೆ, ಒಂದು ಬಾರಿ ಹುಬ್ಬಳ್ಳಿಗೆ ಕೊಡಲಾಗುತ್ತದೆ. ಹಾಗೆ ನೋಡಿದರೆ ಪಾಲಿಕೆಯ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಪಶ್ಚಿಮ, ಧಾರವಾಡ ಗ್ರಾಮಾಂತರ ಹಾಗೂ ಹು- ಧಾ ಸೆಂಟ್ರಲ್ ಕ್ಷೇತ್ರಕ್ಕೆ ಈಗಾಗಲೇ ಮೇಯರ್‌ಗಿರಿ ನೀಡಿದ್ದು ಆಗಿದೆ. ಪೂರ್ವ ಕ್ಷೇತ್ರಕ್ಕೆ ನೀಡುವುದು ಬಾಕಿಯಿದೆ. ಹೀಗಾಗಿ ನಾಲ್ಕನೆಯ ಅವಧಿಯ ಮೇಯರಗಿರಿಯ ಪೂರ್ವ ಕ್ಷೇತ್ರಕ್ಕೆ ನೀಡಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಇದಕ್ಕಾಗಿ ಲಾಬಿ ಕೂಡ ಬಲು ಜೋರಿನಿಂದಲೇ ನಡೆಯುತ್ತಿದೆ.

ಪೂರ್ವ ಕ್ಷೇತ್ರದ ಸದಸ್ಯರಾದ ಪ್ರೀತಿ ಖೋಡೆ, ಪೂಜಾ ಶೇಜವಾಡ್ಕರ್, ಶೀಲಾ ಕಾಟಕರ್ ರೇಸ್‌ನಲ್ಲಿದ್ದಾರೆ. ಇದಕ್ಕಾಗಿ ಲಾಬಿ ಕೂಡ ಬಲು ಜೋರಿನಿಂದಲೇ ನಡೆಯುತ್ತಿದೆ. ಈ ಮೂವರು ಮೊದಲ ಬಾರಿಗೆ ಸದಸ್ಯರಾದವರು. ಈ ನಡುವೆ ಇದೇ ಪೂರ್ವ ಕ್ಷೇತ್ರದ ಹಿರಿಯ ಸದಸ್ಯರಾದ ಮಾಜಿ ಮೇಯರ್ ರಾಧಾಬಾಯಿ ಸಫಾರೆ ಅವರನ್ನು ಮಾಡಿದರೆ ಒಳಿತು ಎಂಬ ಮಾತು ಕೇಳಿ ಬರುತ್ತಿದೆ.

ಈ ನಡುವೆ ಸೆಂಟ್ರಲ್‌ ಕ್ಷೇತ್ರದ ಮೀನಾ ವಂಟಮೂರಿ, ರೂಪಾ ಶೆಟ್ಟಿ ಸೇರಿದಂತೆ ಹಲವರು ಕೂಡ ಪ್ರಯತ್ನಿಸುತ್ತಿರುವುದು ಗೌಪ್ಯವಾಗಿಯೇನೂ ಉಳಿದಿಲ್ಲ.

ಆದರೆ ಪೂರ್ವ ಕ್ಷೇತ್ರಕ್ಕೆ ಈವರೆಗೂ ಕೊಟ್ಟಿಲ್ಲ. ಆದ ಕಾರಣ ಈ ಸಲ ಮೇಯರ್‌ಗಿರಿ ಪೂರ್ವಕ್ಕೆ ಕೊಡಬೇಕೆಂಬ ಒತ್ತಡ ಜೋರಾಗಿರುವುದಂತೂ ಸತ್ಯ.

ಏನೇ ಆಗಲಿ ಜಿಲ್ಲೆಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಒಟ್ಟಾಗಿ ಕುಳಿತು ನಿರ್ಧರಿಸಿದ ಮೇಲೆಯೇ ಫೈನಲ್‌ ಆಗುವುದು. ದಿನಾಂಕ ಇನ್ನೆರಡು ದಿನಗಳಲ್ಲಿ ಘೋಷಣೆಯಾಗಲಿದ್ದು, ಆಗಿನಿಂದ ಲಾಭಿ ಮತ್ತಷ್ಟು ಜೋರಾಗಲಿದೆ ಎಂಬುದು ಕೂಡ ಅಷ್ಟೇ ಸತ್ಯ.

ಮೇಯರ್‌ ಹುದ್ದೆಯ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದೆ. ಚುನಾವಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ಕೂಡ ನೀಡಿತ್ತು. ಆದರೆ ನಾನೇ ಅರ್ಜಿ ಹಿಂಪಡೆದಿದ್ದೇನೆ ಎಂದು ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ