ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿನುಗುವ ಮಳೆ, ಶೀತಗಾಳಿಯ ಚಳಿಯನ್ನೂ ಲೆಕ್ಕಿಸದೆ ಡಿಸಿ ಕಚೇರಿ ಮುಂಭಾಗ ಹಾಕಿದ್ದ ಟೆಂಟ್‌ನಲ್ಲಿ ಮಹಿಳೆಯರು ಮೂರು ದಿನಗಳ ಕಾಲ ಸ್ಥಳದಲ್ಲಿಯೇ ಊಟ, ಉಪಹಾರ ತಯಾರಿಸಿ ಧರಣಿ ನಡೆಸುವ ಮೂಲಕ ಹೋರಾಟದ ಕಿಚ್ಚು ಪ್ರದರ್ಶಿಸಿದರು.
ಮೂರನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಎಐಯುಟಿಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶಾಗಳ ಸೇವೆಗೆ ತಕ್ಕ ಪ್ರತಿಫಲ ನೀಡದೆ ನಿರಾಸೆಗೊಳಿಸಿವೆ. ಆಶಾಗಳಿಗೆ ನಿಶ್ಚಿತ ಗೌರವಧನ ನೀಡುವ ಕುರಿತು ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ಮಾತು ತಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಸರ್ಕಾರ ಧೋರಣೆ ಖಂಡಿಸಿ ಇಡೀ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು, ಮಳೆ, ಚಳಿ ಎನ್ನದೆ ಹೋರಾಟದಲ್ಲಿ ಧುಮುಕಿದ್ದಾರೆ. ಸರ್ಕಾರ ನಡೆ ಹೀಗೆಯೇ ಮುಂದುವರಿದರೆ ಹೋರಾಟ ಮುಂದುವರಿಸುವುದು ಅನಿವಾರ್ಯವಾಗಲಿದೆ ಎಂದರು.ಎಐಎಂಎಸ್‌ಎಸ್ ನ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ಎಐಡಿಎಸ್‌ಒ ಜಿಲ್ಲಾಉಪಾಧ್ಯಕ್ಷೆ ಯು.ಉಮಾದೇವಿ ಹೋರಾಟ ಬೆಂಬಲಿಸಿ ಮಾತನಾಡಿದರು. ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಎ.ಶಾಂತಾ, ರಾಜೇಶ್ವರಿ, ಅಂಬಿಕಾ, ಮಾಣಿಕ್ಯಮ್ಮ, ಈರಮ್ಮ, ವೀರಮ್ಮ, ರಾಜೇಶ್ವರಿ ಮತ್ತಿತರರಿದ್ದರು.