ಧಾರವಾಡ: ದೇಶದ ಸ್ವಾತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದ್ದ ನರೇಂದ್ರ ಗ್ರಾಮದ ಸ್ವಾತಂತ್ರ‍್ಯ ಹೋರಾಟಗಾರ 97 ವರ್ಷದ ಚಂದ್ರಶೇಖರಯ್ಯ ಗುಡ್ಡದಮಠ ಅವರನ್ನು ಗುರುವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ಗ್ರಾಮಕ್ಕೆ ತೆರಳಿ ಸನ್ಮಾನಿಸಿದರು.
ತಮ್ಮ 17ನೇ ವಯಸ್ಸಿನಲ್ಲಿ ಗರಗ, ನರೇಂದ್ರ, ತೇಗೂರ, ಕಿತ್ತೂರ ಭಾಗದ ಅನೇಕ ಹೋರಾಟಗಾರರೊಂದಿಗೆ ಸೇರಿ ಶಸ್ತ್ರಗಳ ರಕ್ಷಣೆ, ಹೋರಾಟಗಾರರಿಗೆ ಊಟ, ನೀರು ಕೊಡುವುದು, ಬ್ರಿಟಿಷರ ಚಲನವಲನದ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೆ, ಒಮ್ಮೆ ಧಾರವಾಡದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟದ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾಗ ಬ್ರಿಟಿಷರ್ ಲಾಠಿ ಏಟಿಗೆ ಕಾಲು ಮುರಿದುಕೊಂಡೆ, ಆಗ ಬ್ರಿಟಿಷ ಪೊಲೀಸರೇ ಧಾರವಾಡ ಸಬ್ ಜೈಲಿಗೆ ಹಾಕಿದರು. ಸುಮಾರು ತಿಂಗಳ ಕಾಲ ಜೈಲಿನಲ್ಲಿ ಇದ್ದೆ ಎಂದು ಚಂದ್ರಶೇಖರಯ್ಯ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ನಿಮ್ಮಂತಹವರ ತ್ಯಾಗ ಮತ್ತು ದೇಶಭಕ್ತಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. ಯುವಕರು ನಿಮ್ಮ ಜೀವನ ಪಾಠ ಕಲಿಯಬೇಕು ಎಂದು ಹೇಳಿದರು.ಅದೇ ರೀತಿ ಸರ್ಕಾರದ ಸೌಲಭ್ಯಗಳು ದೊರಕುತ್ತಿರುವ ಬಗ್ಗೆ ವಿಚಾರಿಸಿದರು. ಸರ್ಕಾರದಿಂದ ದೊರೆಯುವ ಆರೋಗ್ಯ ಸೌಲಭ್ಯ ಪಡೆಯಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಚಂದ್ರಶೇಖರಯ್ಯರ ಪುತ್ರಿ ನಾಗರತ್ನ, ಪುತ್ರ ಬಸವರಾಜ ಹಾಗೂ ಗ್ರಾಮಸ್ಥರಿದ್ದರು.