ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಬುಧವಾರದೊಳಗೆ ಉತ್ತರ ನೀಡದಿದ್ದರೆ ಅಂಥ ಅಧಿಕಾರಿಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ತಾವು ಕೊಡುವ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕಟುವಾಗಿ ಹೇಳಿದರು.
ಪ್ರಶ್ನೋತ್ತರ ಕಲಾಪದ ನಂತರ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಬೋಜೇಗೌಡ ಅವರು ಸದಸ್ಯರು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ನಿತ್ಯ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದೆ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಸದನವನ್ನು ಅಧಿಕಾರಿಗಳು ಹಗುರವಾಗಿ ತೆಗೆದುಕೊಂಡಿದ್ದಾರೆ. ಅಧಿವೇಶನ ಮುಗಿಯುತ್ತಾ ಬರುತ್ತಿದ್ದರೂ ಉತ್ತರ ನೀಡಲು 10-15 ದಿನ ಕಾಲಾವಕಾಶ ಕೇಳುತ್ತಿದ್ದಾರೆ. ಸಭಾಪತಿಗಳು ಸರ್ಕಾರಕ್ಕೆ ಹತ್ತಾರು ಬಾರಿ ಹೇಳಿದರೂ ಉತ್ತರ ಕೊಡಿಸುವ ಕೆಲಸ ಮಾಡುತ್ತಿಲ್ಲ. ಸದಸ್ಯರ ರಕ್ಷಕರಾಗಿರುವ ಸಭಾಪತಿಗಳು ಈ ವಿಷಯದಲ್ಲಿ ಅಸಹಾಯಕರಾಗಬಾರದು ಎಂದರು.ಸದಸ್ಯರ ಮಾತಿಗೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕಲಾಪ ಮುಗಿದ ನಂತರ ಸಭಾನಾಯಕ, ಪ್ರತಿಪಕ್ಷದ ನಾಯಕ, ಎರಡೂ ಕಡೆಯ ಮುಖ್ಯ ಸಚೇತಕರು ಹಾಗೂ ಜೆಡಿಎಸ್ ನಾಯಕರು ತಮ್ಮ ಕಚೇರಿಗೆ ಬಂದು ಬಾಕಿ ಉತ್ತರಗಳ ಸಂಖ್ಯೆ ಸೇರಿ ಎಲ್ಲ ವಿವರವನ್ನು ತಮಗೆ ತಿಳಿಸಬೇಕು. ಸದಸ್ಯರಿಂದ ಅಸಮರ್ಥ ಸಭಾಪತಿ ಎಂದು ಹೇಳಿಸಿಕೊಳ್ಳಲು ಇಷ್ಟವಿಲ್ಲ. ಉತ್ತರ ನೀಡದ ಅಧಿಕಾರಿಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ತಾವು ಕೊಡುವ ನಿರ್ದೇಶನವನ್ನು ಸರ್ಕಾರ ಪಾಲಿಸಬೇಕು ಎಂದು ಹೇಳಿದರು.
ಕಾಂಗ್ರೆಸ್‌ನ ಪುಟ್ಟಣ್ಣ ಮಾತನಾಡಿ, ಉತ್ತರ ನೀಡದ ಅಧಿಕಾರಿಗಳನ್ನು ಸದನಕ್ಕೆ ಕರೆಸಿ ಕಟಕಟೆಯಲ್ಲಿ ನಿಲ್ಲಿಸಬೇಕು. ಅಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸಭಾಪತಿಗಳು ತಮಗಿರುವ ಅಧಿಕಾರ ಚಲಾಯಿಸಬೇಕು. ಅಸಹಾಯಕತೆ ವ್ಯಕ್ತಪಡಿಸಬಾರದು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಾಗ ಮಾತ್ರ ಉಳಿದವರಿಗೆ ಸರಿಯಾದ ಸಂದೇಶ ಹೋಗುತ್ತದೆ ಎಂದರು.
ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಬರಲಿಲ್ಲ. ಈಗ ಕೇಳಿದ ಪ್ರಶ್ನೆಗಳಿಗೂ ಉತ್ತರ ಬರುವುದಿಲ್ಲ. ಹೀಗಾಗಿ ಸಭಾಪತಿಗಳು ಕಠಿಣವಾದ ಕ್ರಮ ಜರುಗಿಸಬೇಕು ಎಂದರು.