ನಾನೂ ಸಾವನ್ನು ಗೆದ್ದು ಬಂದಿದ್ದೇನೆ: ಡಾ.ವಿಜಯಲಕ್ಷ್ಮಿ ದೇಶಮಾನೆ

KannadaprabhaNewsNetwork |  
Published : Mar 25, 2026, 01:45 AM IST
24ಕೆಎಂಎನ್ ಡಿ17 | Kannada Prabha

ಸಾರಾಂಶ

ಕ್ಯಾನ್ಸರ್ ರೋಗಕ್ಕೆ ಕೇವಲ ವೈದ್ಯಕೀಯ ಚಿಕಿತ್ಸೆ ಸಾಲದು. ಚಿಕಿತ್ಸೆ ಜೊತೆಗೆ ಆತನಿಗೆ ಆತ್ಮಸ್ಥೈರ್ಯ ತುಂಬಲು ಅವರಿಗೊಬ್ಬ ಆತ್ಮೀಯ ಸ್ನೇಹಿತನ ಅವಶ್ಯಕತೆ ಇದೆ. ರೋಗಿಯ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬುವುದೇ ಶ್ರೇಷ್ಠ ಚಿಕಿತ್ಸೆಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ರೋಗಿಯ ಕ್ಲಿಷ್ಟಕರ ಸನ್ನಿವೇಶದಲ್ಲಿ ಕೊನೇ ಕ್ಷಣದವರೆಗೂ ಜೀವ ಉಳಿಸುವ ಪ್ರಯತ್ನ ಮಾಡುವುದೇ ವೈದ್ಯನ ನಿಜವಾದ ಕರ್ತವ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅಭಿಪ್ರಾಯಪಟ್ಟರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಪದ್ಮ ಜಿ.ಮಾದೇಗೌಡ ಪ್ರತಿಷ್ಠಾನದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 12ನೇ ವರ್ಷದ ಶ್ರೀಮತಿ ಪದ್ಮ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಾನು ಬಡತನದಲ್ಲಿ ಹುಟ್ಟಿ ವೈದ್ಯೆಯಾಗಿ ಜನ ಸೇವೆ ಮಾಡುತ್ತಿದ್ದೇನೆ. ನಾನೂ ಸಹ ಸಾವನ್ನು ಗೆದ್ದು ಬಂದಿದ್ದೇನೆ. ವೈದ್ಯ ವೃತ್ತಿ ಬಹಳ ಪವಿತ್ರ ವೃತ್ತಿ. ಅದಕ್ಕೆ ನ್ಯಾಯ ಸಿಗಬೇಕಾದರೇ ರೋಗಿಯ ಜೀವ ಉಳಿಸಲು ಕೊನೆ ಕ್ಷಣದವರೆಗೆ ಪ್ರಯತ್ನ ಮಾಡಬೇಕು ಎಂದರು.

ಕ್ಯಾನ್ಸರ್ ರೋಗಕ್ಕೆ ಕೇವಲ ವೈದ್ಯಕೀಯ ಚಿಕಿತ್ಸೆ ಸಾಲದು. ಚಿಕಿತ್ಸೆ ಜೊತೆಗೆ ಆತನಿಗೆ ಆತ್ಮಸ್ಥೈರ್ಯ ತುಂಬಲು ಅವರಿಗೊಬ್ಬ ಆತ್ಮೀಯ ಸ್ನೇಹಿತನ ಅವಶ್ಯಕತೆ ಇದೆ. ರೋಗಿಯ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬುವುದೇ ಶ್ರೇಷ್ಠ ಚಿಕಿತ್ಸೆಯಾಗಿದೆ ಎಂದರು.

ಮಾಜಿ ಸಂಸದ ದಿ.ಜಿ.ಮಾದೇಗೌಡರ ಕಾವೇರಿ ಚಳವಳಿ ಹೋರಾಟಗಳನ್ನು ನಾನು ದೃಶ್ಯ ಮಾಧ್ಯಮಗಳಲ್ಲಿ ನೋಡಿ ರೈತ ಪರ ಕಾಳಜಿ, ಹೋರಾಟಗಳನ್ನು ತಿಳಿದಿದ್ದೇನೆ. ಇಂದಿನ ಯುವಕರಿಗೆ ಅವರು ಆದರ್ಶವಾಗಿದ್ದು, ಆ ವ್ಯಕ್ತಿ ಸೂರ್ಯ-ಚಂದ್ರ ಇರುವರೆಗೂ ಶಾಶ್ವತ ಎಂದು ಶ್ಲಾಘಿಸಿದರು.

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಜಿ.ಮಾದೇಗೌಡರು ನೆರವಾಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸಗಳನ್ನು ಗೌಡರು ಮಾಡಿದ್ದಾರೆ. ಸಂಸ್ಥೆ ಕ್ಯಾಂಪಸ್ ವಿವಿ ರೀತಿ ಕಂಗೊಳಿಸುತ್ತಿದೆ. ಮಾದೇಗೌಡರಿಗೆ ಬೆನ್ನೆಲುಬಾಗಿ ನಿಂತು ಪತ್ನಿ ಪದ್ಮಮ್ಮ ಅವರು ಮಹಿಳೆಯರ ಶಿಕ್ಷಣಕ್ಕೆ ಶ್ರಮ ವಹಿಸಿದ್ದಾರೆ. ಇವರ ಶ್ರಮ ಸಾರ್ಥಕವಾಗಿಸಲು ಮಹಿಳೆಯರು ಉನ್ನತ ಶಿಕ್ಷಣ ಪಡೆದು ಸ್ವಾವಲಂಭಿಗಳಾದಾಗ ಮಾತ್ರ ಸಾಧ್ಯ. ಪದ್ಮಮ್ಮ ಜಿ.ಮಾದೇಗೌಡರ ಹೆಸರಿನಲ್ಲಿ ನೀಡದ ಪ್ರಶಸ್ತಿಗೆ ನಾನು ಮನದುಂಬಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ಜಿ.ಮಾದೇಗೌಡರು ಸಚಿವರನ್ನು, ಜನಪರ ಕೆಲಸಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿ ಅರಗಿಸಿಕೊಂಡ ಕೆಚ್ಚೆದೆಯ ಹೋರಾಟಗಾರ. ಅಂತಹ ವ್ಯಕ್ತಿ ವ್ಯಕ್ತಿತ್ವ ಮತ್ತೊಬ್ಬ ಇಲ್ಲ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತ ಗೌಡರು ಹಾಕಿ ಕೊಟ್ಟ ಮಾರ್ಗದಲ್ಲಿ ಪುತ್ರ ಮಧು ಜಿ.ಮಾದೇಗೌಡ ನಡೆಯುತ್ತಿದ್ದಾರೆ. ಅವರ ಪುತ್ರ ಆಶಯ್ ಮಧು ಹೊಸ ಆಲೋಚನೆ ಇಟ್ಟು ಕೊಂಡು ಸಂಸ್ಥೆಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶಿಕ್ಷಕರು, ಉಪಾನ್ಯಾಸಕಿಯರು ಮತ್ತು ಸಿಬ್ಬಂದಿಗೆ ನಡೆದ ಹಲವು ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮವನ್ನು ಭಾರತೀ ವಿದ್ಯಾಸಂಸ್ಥೆ ಅಧ್ಯಕ್ಷರು, ಎಂಎಲ್ಸಿ ಮಧು ಜಿ.ಮಾದೇಗೌಡ ಉದ್ಘಾಟಿಸಿದರು. ಜಿ.ಮಾದೇಗೌಡ ಪತ್ನಿ ಪದ್ಮ ಜಿ.ಮಾದೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ.ನಂಜೇಗೌಡ, ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು, ಕಾರ್ಯದರ್ಶಿ ಸಿದ್ದೇಗೌಡ, ಟ್ರಸ್ಟಿಗಳಾದ ಕಾರ್ಕಹಳ್ಳಿ ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ, ಮಿಮ್ಸ್ ಮಾಜಿ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಕಾರ್ಯಕ್ರಮದ ಸಂಯೋಜಕಿ ಮಮತನಾಗ್, ಪ್ರತಿಮಾ, ಕುಮುದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವರ ಅಪಹಾಸ್ಯಕ್ಕೆ ಕ್ಷಮೆ ಕೇಳುವೆ: ರಣವೀರ್‌
ಎಲ್ಲ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತಗೊಳಿಸಲು ಶ್ರಮಿಸಿ: ಜಿಪಂ ಸಿಇಒ ಮೋನಾ ರೋತ್