ಒಡೆದ ಮನಸ್ಸನ್ನು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರು ಶ್ರೀಗಳು

KannadaprabhaNewsNetwork |  
Published : Mar 25, 2026, 01:30 AM IST
ಫೋಟೊ:೨೪ಕೆಪಿಸೊರಬ-೦೧ : ಸೊರಬ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಭೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಮತ್ತು ಶಾಂತಿ ನೆಮ್ಮದಿಗಾಗಿ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. | Kannada Prabha

ಸಾರಾಂಶ

ಮಾನವ ಜೀವನ ಉತ್ಕೃಷ್ಟವಾದುದು. ಅರಿವು ಆಚಾರಗಳ ಪ್ರಜ್ಞೆ ಬೇಕು. ಅರಿವಿನ ದಾರಿಯಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅವಶ್ಯಕ. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಮಾನವ ಜೀವನ ಉತ್ಕೃಷ್ಟವಾದುದು. ಅರಿವು ಆಚಾರಗಳ ಪ್ರಜ್ಞೆ ಬೇಕು. ಅರಿವಿನ ದಾರಿಯಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅವಶ್ಯಕ. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾನವೀಯತೆಯಲ್ಲಿ ನಂಬಿಕೆ ವಿಶ್ವಾಸಗಳನ್ನು ಯಾವತ್ತೂ ಕಳೆದುಕೊಳ್ಳಬಾರದು. ಅನುಭವದಿಂದ ಸಿಗುವ ಜ್ಞಾನ ಓದಿನಿಂದ ಸಿಗುವುದಿಲ್ಲ. ಒರೆಗಲ್ಲಿಗೆ ಹಚ್ಚಿ ತಿಕ್ಕಿದಾಗ ಶ್ರೀಗಂಧ ಹೊರ ಹೊಮ್ಮುವಂತೆ ಸಂಕಷ್ಟಗಳನ್ನು ಎದುರಿಸಿದ ಮನುಷ್ಯ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಬದುಕು ಮಾತ್ರ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯಬಾರದು. ಗಾಡಾಂಧಕಾರದಲ್ಲಿ ಮುಳುಗಿದ ಮಾನವರನ್ನು ಎಚ್ಚರಿಸಿ ಜಾಗೃತಿ ಉಂಟು ಮಾಡುವುದಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಅವತಾರದ ಮೂಲ ಉದ್ದೇಶವಾಗಿದೆ ಎಂದರು.

ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಂಯೋಜಿಸಿ ಗುರುಸ್ಥಲದ ಹಿರಿಮೆಯನ್ನು ಸಾರುತ್ತಿರುವುದು ತಮಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ಹರುಷ ವ್ಯಕ್ತಪಡಿಸಿ, ಶ್ರೀಗಳವರಿಗೆ ರೇಶ್ಮೆ ಮಡಿ ಸ್ಮರಣಿಕೆ ಫಲಪುಷ್ಪವಿತ್ತು ಶುಭ ಹಾರೈಸಿದರು.

ನೇತೃತ್ವ ವಹಿಸಿದ ಶಾಂತಪುರ ಹಿರೇಮಠದ ಶಿವಾನಂದ ಶಿವಾಚಾರ್ಯರು ಮಾತನಾಡಿ, ಮಾತು ಒಂದುಗೂಡಿಸಬೇಕೇ ವಿನಾ ಒಡೆಯಬಾರದು. ನದಿ ಸಮುದ್ರಗಳನ್ನು ಸೇತುವೆ ಮೂಲಕ ಗುಡ್ಡ ಬೆಟ್ಟಗಳನ್ನು ಸುರಂಗ ಮಾರ್ಗ ಮೂಲಕ ದಾಟಬಹುದು. ಮನದ ಮಧ್ಯೆ ನಿರ್ಮಾಣಗೊಂಡ ಸ್ವಾರ್ಥದ ಗೋಡೆಗಳನ್ನು ದಾಟುವುದು ಬಲು ಕಷ್ಟ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ದಾರಿದೀಪವೆಂದರು.

ಅಧ್ಯಕ್ಷತೆ ವಹಿಸಿದ ಬಂಕಾಪುರ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಬೆಳಕಿನಲ್ಲಿ ಬೆಳಕಿಗೆ ಬೆಲೆಯಿಲ್ಲ. ಆದರೆ ಕತ್ತಲೆಯಲ್ಲಿ ಕಿರು ದೀಪಕ್ಕೂ ದೊಡ್ಡದಾದ ಬೆಲೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಉಜ್ವಲ ಬಾಳಿಗೆ ಆಸರೆಯಾಗಿವೆ ಎಂದರು.

ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ಜಡೆ ವಿರಕ್ತಮಠದ ಡಾ.ಮಹಾಂತಸ್ವಾಮಿಗಳು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಕುರವತ್ತಿ ನಂದೀಶ್ವರ ಶಿವಾಚಾರ್ಯರು, ಲಕ್ಕವಳ್ಳಿ ಜೈನ ಮಠದ ಭಟ್ಟಾರಕ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸದಾನಂದಗೌಡ್ರು ಬಿಳಗಲಿ, ಎ.ಎನ್. ಪ್ರಕಾಶ, ಗುರುಕುಮಾರ್ ಪಾಟೀಲ ಸೇರಿದಂತೆ ಹಲವಾರು ಗಣ್ಯರಿಗೆ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು. ವೀರೇಂದ್ರ ಪಾಟೀಲ ಬಂಕವಳ್ಳಿ ನಿರೂಪಿಸಿದರು. ಗಿರೀಶ ಮತ್ತು ಸಹೋದರರು ಪ್ರಸಾದ ಸೇವೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ನೊಗ ಹೊತ್ತಿದ್ದೇನೆ, ಮುಂದೆಯೂ ಹೊರುತ್ತೇನೆ
ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ