ಪರಿಶಿಷ್ಟರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ನಿಂತಿಲ್ಲ

KannadaprabhaNewsNetwork | Published : Mar 22, 2025 2:04 AM

ಸಾರಾಂಶ

ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಹೋಬಳಿಯ ಕಲ್ಕುಂಟೆ ಗ್ರಾಮದಲ್ಲಿ ಶ್ರೀ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.

ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿ ವಿಷಾಧಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಪರಿಶಿಷ್ಟರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ನಿಂತಿಲ್ಲವೆಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.

ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಹೋಬಳಿಯ ಕಲ್ಕುಂಟೆ ಗ್ರಾಮದಲ್ಲಿ ಶ್ರೀ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ದೊರಕಿಸಿಕೊಡದೇ ಇದ್ದಿದ್ದರೆ ಪರಿಶಿಷ್ಟರ ಬದುಕು ಮತ್ತಷ್ಟು ನಿಕೃಷ್ಟಕ್ಕೆ ಒಳಗಾಗುತ್ತಿತ್ತು ಎಂದರು.ನಾಯಕ ಸಮಾಜದಲ್ಲಿ 600ಕ್ಕೂ ಹೆಚ್ಚು ಬೆಡಗುಗಳಿದ್ದು ಹೆಚ್ಚಿನ ಬುಡಕಟ್ಟು ಸಂಸ್ಕೃತಿ ಕಾಣುತ್ತಿದ್ದೇವೆ. ನಾವು ಯಾರು ಸಹ ಅರ್ಜಿ ಹಾಕಿ ಈ ಜಾತಿಯಲ್ಲಿ ಹುಟ್ಟಿಲ್ಲ. ಎಲ್ಲಾ ಜಾತಿಗಳೊಂದಿಗೆ ಒಟ್ಟಾಗಿ ಹೋಗಬೇಕಿದೆ.

ನಾಯಕ ಸಮಾಜದಲ್ಲಿ 48 ಬುಡಕಟ್ಟು ಸಮುದಾಯಗಳಿವೆ. ಪರಿಶಿಷ್ಟ ಪಂಗಡಕ್ಕೆ 15 ಶಾಸಕರು ರಾಜ್ಯದಲ್ಲಿ ಆಯ್ಕೆ ಆಗುವ ಮೂಲಕ ಸಮಾಜಕ್ಕೆ ಶಕ್ತಿ ಬಂದಿದೆ. ಮೀಸಲಾತಿ ಹೆಚ್ಚಳದಿಂದ 7 ರಿಂದ 8 ಜನರಿಗೆ ಮೆಡಿಕಲ್ ಸೀಟು ಮೀಸಲಿಡುತ್ತಿದ್ದಾರೆ. 30 ವರ್ಷಗಳಿಂದ ನಾವು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುತ್ತಿದ್ದರು ಆದರೆ ಮೀಸಲಾತಿ ಹೋರಾಟದಿಂದ ನಮಗೆ ಸಾಕಷ್ಟು ಅನುಕೂಲವಾಯಿತು ಎಂದು ಹೇಳಿದರು.

ನಮ್ಮ ಸಮಾಜದ ಜಾಗೃತಿಗಾಗಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ಮಾಡುತ್ತಿದ್ದೇವೆ. ಸಮಾಜದ ಮಕ್ಕಳು ಶಿಕ್ಷಣವನ್ನು ಪಡೆದು ಜಾಗೃತಿಯಿಂದ ತಮ್ಮ ಊರುಗಳಲ್ಲಿ ಅರಿವು ಮೂಡಿಸಬೇಕು. ಸಮಾಜ ಸಂಘಟನೆ ಮಾಡುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಶ್ರೀಗಳು ಹೇಳಿದರು.

ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ನಮ್ಮ ಸಮಾಜ ಮುನ್ನೆಸಿಕೊಂಡು ಹೋಗುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚು ಕಾಣುತ್ತಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಉತ್ತಮ ಅಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕಾರ ಮಾಡಿ ತಮ್ಮ ಹಳ್ಳಿಗಳಲ್ಲ ಜಾಗೃತಿ ಮೂಡಿಸಿ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಶ್ರಮಿಸಬೇಕು. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕೊಡಿಸುವ ಮೂಲಕ ಇಡೀ ರಾಜ್ಯದ ಸಾವಿರಾರು ಯುವ ಸಮೂಹಕ್ಕೆ ಬದುಕು ಕಟ್ಟಿಕೊಟ್ಟಿದ್ದಾರೆ ಎಂದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಅಹೋಬಲ ನರಸಿಂಹ ಸ್ವಾಮಿ ದೇವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಬುಡಕಟ್ಟು ಸಂಪ್ರದಾಯಗಳು ಭಕ್ತಿಯಿಂದ ನಡೆಯುತ್ತದೆ. ಯಾವುದೇ ಅದ್ಧೂರಿ ಆಡಂಬರ ಇಲ್ಲದೆ, ಶೋಷಣೆ ಇಲ್ಲದೇ ಬುಡಕಟ್ಟು ದೇವರ ಕಾರ್ಯ ಆಚರಣೆಗೆ ಒಳಪಡುತ್ತಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ನಮ್ಮ ಮನೆ ದೇವರು ಶ್ರೀ ಅಹೋಬಲ ನರಸಿಂಹ ಸ್ವಾಮಿ ದೇವರ ಜಾತ್ರೆ ಪ್ರತಿ ಮೂರು ವರ್ಷಕ್ಕೆ ನಡೆಯುತ್ತದೆ. ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿ ಸಾರುತ್ತೇವೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಬುಡಕಟ್ಟು ಸಂಸ್ಕೃತಿಯನ್ನು ನಾವು ಕಾಣುತ್ತೇವೆ ಎಂದರು.

ಈ ವೇಳೆ ಮುಖಂಡರಾದ ಲಿಂಗವ್ವ ನಾಯಕನಹಳ್ಳಿ ತಿಪ್ಪೇಸ್ವಾಮಿ, ಸೊಂಡೇಕೊಳ ಶ್ರೀನಿವಾಸ್, ಶೇಖರಪ್ಪ, ಮದ್ದಣ್ಣ, ಹಳವುದರ ತಿಪ್ಪೇಸ್ವಾಮಿ, ವಕೀಲ ನಾಗರಾಜ್ ಇದ್ದರು.

Share this article