ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ತಾಲೂಕು ಗೋಕುಲ ವಿದ್ಯಾಸಂಸ್ಥೆಯಲ್ಲಿದ್ದ ಮೇಘಾಲಯ ಮಕ್ಕಳ ಸಾವಿಗೆ ಶಿಕ್ಷಣ ಇಲಾಖೆಯವರ ಲೋಪ ಕಾರಣ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆರೋಪಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಚಿಕ್ಕಸ್ವಾಮಿ ಅವರು ಗೋಕುಲ ವಿದ್ಯಾಸಂಸ್ಥೆಗೆ ಒಂದರಿಂದ ಎಂಟನೇ ತರಗತಿಯವರೆಗೆ ಮಾತ್ರ ಅನುಮತಿ ಪಡೆದಿದೆ. ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿಗೆ ಮಕ್ಕಳನ್ನು ದಾಖಲಿಸಿಕೊಂಡು ಕಿರುಗಾವಲು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. ಒಂದೇ ಕಟ್ಟಡದಲ್ಲಿ ಕಿರುಗಾವಲು, ಸುಜ್ಜಲೂರು ಮತ್ತು ಕಾಗೇಪುರದ ಮಕ್ಕಳು ವ್ಯಾಸಂಗ ಮಾಡುತ್ತಿರುವ ಬಗ್ಗೆ ಹಿಂದೆಯೇ ವರದಿ ನೀಡಿದ್ದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ವರದಿಯನ್ವಯ ಕ್ರಮ ಕೈಗೊಂಡಿದ್ದರೆ ಇಂತಹದೊಂದು ದುರ್ಘಟನೆ ನಡೆಯುವುದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲವನ್ನೂ ಮುಚ್ಚಿ ಹಾಕಿ ಮಕ್ಕಳ ಸಾವಿಗೆ ಕಾರಣರಾಗಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಇದಲ್ಲದೇ, ಜ್ಞಾನೇಶ್ ಕಾನ್ವೆಂಟ್ ಹಾಗೂ ಆದರ್ಶ ಶಾಲೆಗಳು ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸಲು ಅನುಮತಿ ಪಡೆದು ಪಟ್ಟಣದಲ್ಲಿ ನಡೆಸುತ್ತಿವೆ. ಇದರ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.
ಕಾಗೇಪುರದಲ್ಲಿ ದುರಂತ ಸಾವಿಗೀಡಾದ ಮಕ್ಕಳು ಕಿರುಗಾವಲು ಶಾಲೆಯೊಂದರಲ್ಲಿ ದಾಖಲಾತಿ ಹೊಂದಿ ಕಾಗೇಪುರದ ಗೋಕುಲ ಶಾಲೆಯಲ್ಲಿ ಕಲಿಸುತ್ತಿದ್ದರು. ಮಕ್ಕಳಿಂದ ವಿಪರೀತ ದುಡಿಮೆ ಮಾಡಿಸಿಕೊಳ್ಳುತ್ತಿದ್ದರು. ಊಟಕ್ಕಾಗಿ ಅಕ್ಕಪಕ್ಕದ ಗ್ರಾಮದ ತಿಥಿ, ಮದುವೆ, ಬೀಗರ ಊಟದ ಉಳಿದ ಆಹಾರವನ್ನು ಸಂಗ್ರಹಿಸಿ ನೀಡಲಾಗುತ್ತಿತ್ತು ಎನ್ನುವುದೇ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದು ದೂರಿದರು.ಪ್ರಕರಣದಲ್ಲಿ ಗೋಕುಲ ಸಂಸ್ಥೆಯ ಮುಖ್ಯಸ್ಥ ಲಂಕೇಶ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡದೆ ಊಟ ತಯಾರಿಸಿದವರು, ಊಟಕ್ಕೆ ಆರ್ಡರ್ ಕೊಟ್ಟವರನ್ನು ಮೊದಲನೇ, ಎರಡನೇ ಆರೋಪಿಯನ್ನಾಗಿ ಮಾಡಿ, ಲಂಕೇಶ್ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಿರುವುದು ಅವರಿಗಿರುವ ಪ್ರಭಾವವನ್ನು ತೊರಿಸುತ್ತದೆ. ದೋಷಾರೋಪಣಾಪಟ್ಟಿ ಸಲ್ಲಿಸುವಾಗ ಆತನನ್ನು ಮೊದಲನೇ ಆರೋಪಿಯನ್ನಾಗಿ ಮಾಡಬೇಕು. ಮಕ್ಕಳ ರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಇಡೀ ಪ್ರಕರಣದ ಹೊಣೆಗಾರಿಕೆಯನ್ನು ರಾಷ್ಟ್ರೀಯ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊಂದಬೇಕು. ರಾಜ್ಯಾಧ್ಯಕ್ಷರ ಕೆ.ನಾಗಣ್ಣಗೌಡರ ನೆಪಮಾತ್ರದ ಭೇಟಿಯಿಂದ ಪ್ರಯೋಜನವಿಲ್ಲ. ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಳ್ಳುವುದು. ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರ ತಲಾ ೨೫ ಲಕ್ಷ ರು. ನೀಡುವಂತೆ ಒತ್ತಾಯಿಸಿದರು.ಗೋಷ್ಠಿಯಲ್ಲಿ ಎನ್.ಎಲ್.ಭರತ್‌ರಾಜ್, ಸುಶೀಲಾ. ಬಿ.ಹನುಮೇಶ್, ಸಿ.ಕುಮಾರಿ ಇದ್ದರು.