ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನಗರದ ಕನ್ನಡ ಜಾಗೃತ ಭವನದಲ್ಲಿ ಶ್ರೀ ನೆಲದ ಆಂಜನೇಯ ಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ, ಕನ್ನಡ ಜಾಗೃತ ಪರಿಷತ್ ಹಾಗೂ ಭಾಗ್ಯವಿಧಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಹಯೋಗದೊಂದಿಗೆ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಾರ್ಮಿಕರು ಇಂದಿಗೂ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದು, ಕಾರ್ಮಿಕರ ಜೀವನ ಸುಧಾರಿಸಲು ಕನಿಷ್ಠ ವೇತನ ಪದ್ಧತಿ ಜಾರಿಯಾಗಬೇಕಿದೆ. ವೇತನ ನಿರ್ಧರಿಸುವ ಮಾನದಂಡಗಳನ್ನು ಕುರಿತು ಮಾಲೀಕರಿಗೆ ಅರಿವಿನ ಅವಶ್ಯಕತೆ ಇದೆ. ಪ್ರಸ್ತುತ ಕಾರ್ಮಿಕರಿಗೆ ದೊರೆಯುತ್ತಿರುವ ಸೌಲಭ್ಯಗಳು ಸಾವಿರಾರು ಕಾರ್ಯಕರ್ತರ ನಿರಂತರ ಹೋರಾಟಗಳ ಫಲವಾಗಿದೆ. ನಮ್ಮಲ್ಲಿ ಸಂಘಟಿತ ಹಾಗೂ ಅಸಂಘಟಿತ ಎಂಬ ಎರಡು ವಲಯಗಳ ಕಾರ್ಮಿಕರಿದ್ದಾರೆ. ಆದರೆ ಎರಡೂ ವಲಯದ ಕಾರ್ಮಿಕರಿಗೆ ಸೂಕ್ತ ಭದ್ರತೆಯ ಕೊರತೆ ಇದೆ ಎಂಬುದನ್ನು ಸರ್ಕಾರಗಳು ಅರಿಯಬೇಕಿದೆ ಎಂದರು.ನಿವೃತ್ತ ಪ್ರಾಧ್ಯಾಪಕ ಚಂದ್ರಪ್ಪ ಮಾತನಾಡಿ, ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ ನಡೆಸಿರುವ ಸಮೀಕ್ಷೆ ಪ್ರಕಾರ ದೇಶದಲ್ಲಿ 38 ಕೋಟಿಗಿಂತ ಅಧಿಕ ಅಸಂಘಟಿತ ಕಾರ್ಮಿಕ ವರ್ಗದವರಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ವಿಶೇಷ ಕಾರ್ಮಿಕ ನೀತಿಗಳಿವೆ. ಅವರೆಲ್ಲರೂ ಇ-ಪೋರ್ಟಲ್‌ನಲ್ಲಿ ದಾಖಲಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಸರ್ಕಾರಗಳು ಕಾರ್ಮಿಕರ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕಿದೆ ಎಂದರು.
ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತ್ಯಂತ ಹೆಚ್ಚಿನ ಅಂಕ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ಶ್ರಮಿಸುತ್ತಿರುವ ಮುನಿಶಾಮಣ್ಣ, ರಾಮಣ್ಣ, ಪಾಪಣ್ಣ, ರಂಗಮ್ಮ, ಚಿನ್ನಪ್ಪ, ಬಿ ಎಲ್ ರಾಮಕೃಷ್ಣ, ಕೆ. ಪಿ. ಶ್ರೀನಿವಾಸ್, ಸಿ. ಮುನಿರಾಜು ಸೇರಿ ಹಲವು ಹಿರಿಯ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.