ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುರುಕ್ಷೇತ್ರ-ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಮೂರು ತಿಂಗಳ ತರಬೇತಿ ನಂತರ ನಾಟಕವನ್ನು ಪ್ರದರ್ಶಿಸಿ ಪೊಲೀಸರಲ್ಲಿನ ಕಲಾ ಪ್ರತಿಭೆ ಮತ್ತು ಸಮಾಜ ಸೇವೆಗೂ ಮೀರಿ ಅವರ ಬಹುಮುಖ ಪ್ರತಿಭೆ ಅನಾವರಣಗೊಳಿಸಿದರು.ಒಂದಲ್ಲ ಒಂದು ಕಾರಣಕ್ಕೆ ಸದಾ ಬ್ಯುಸಿ ಆಗಿರುವ ಪೊಲೀಸರು ಬಣ್ಣ ಹಚ್ಚಿದರೆ ಹೇಗಿರುತ್ತೆ, ಕಲಾವಿದರಾಗಿ ಜನರಿಗೆ ರಂಜಿಸುವುಕ್ಕೆ ಶುರುಮಾಡಿದರೆ ಜನ ಹೇಗೆ ಸ್ವೀಕರಿಸುತ್ತಾರೆ, ಇಂತಹದ್ದೇ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ತಮ್ಮೆಲ್ಲಾ ಒತ್ತಡವನ್ನು ಬದಿಗಿಟ್ಟು ಎರಡು-ಮೂರು ತಿಂಗಳು ಅಭ್ಯಾಸ ಮಾಡಿ ವೇದಿಕೆಯಲ್ಲಿ ಅದ್ಭುತವಾಗಿ ಪೌರಾಣಿಕ ನಾಟಕ ಪ್ರದರ್ಶನ ಮಾಡುವ ಮೂಲಕ ಜನರಿಂದ ಸೈ ಎನಿಸಿಕೊಂಡರು.
ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಚಾಮುಂಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿ ಸಹಯೋಗದೊಂದಿಗೆ ನಡೆದ ಪೌರಾಣಿಕ ನಾಟಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಪಾತ್ರಧಾರಿಗಳಾಗಿ ಅದ್ಭುತವಾಗಿ ಅಭಿನಯಿಸಿದರು. ಪೊಲೀಸರ ಈ ನೂತನ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.2016ರ ನಂತರ ನಿಂತು ಹೋಗಿದ್ದ ನಾಟಕ ಕಲೆಗೆ ಮರು ಜೀವ ನೀಡಿದ ಪೊಲೀಸರು, ಮನಸ್ಸು ಮಾಡಿದರೆ ಜನರನ್ನ ರಂಜಿಸಬಲ್ಲರು ಎಂದು ಸಾಬೀತು ಮಾಡಿದ್ದಾರೆ. ಸ್ವತಃ ಇನ್ಸ್ ಪೆಕ್ಟರ್ ಕೆ.ವೆಂಕಟೇಶ್ - ಸೂತ್ರಧಾರಿ, ಬಿಡದಿ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿ.ವೈ.ಕೇಶವಮೂರ್ತಿ-1ನೇ ದುರ್ಯೋಧನ , ಎಸ್.ಟಿ.ಬೋರೇಗೌಡ - 2ನೇ ಕೃಷ್ಣ, ನರಸಿಂಹಯ್ಯ-ಧರ್ಮರಾಯ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಎಂ.ನಾಗರಾಜು-1ನೇ ದುರ್ಯೋಧನನಾಗಿ ಮಿಂಚಿದರು. ಭೀಮ, ಅರ್ಜುನ, ಧರ್ಮರಾಯ, ಕರ್ಣ ... ಹೀಗೆ ಒಂದೊಂದು ಪಾತ್ರದಲ್ಲಿ ಒಬ್ಬೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮನೋಜ್ಞ ಅಭಿನಯಕ್ಕೆ ಕಲಾಸಕ್ತರು ಬೆರಗಾದರು.
ಪೊಲೀಸರಲ್ಲಿ ಅಡಗಿರುವ ಪ್ರತಿಭೆ:ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ , ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ತಮ್ಮೊಳಗೆ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ಕಡಿಮೆ. ನಾಟಕ ಪ್ರದರ್ಶನಕ್ಕೆ ಅನುಮಕೋರಿದ ಸಂದರ್ಭದಲ್ಲಿ ಸಂತಸದಿಂದ ಒಪ್ಪಿಗೆ ನೀಡಿದೆ ಎಂದರು.
ಈ ವೇಳೆ ಅಪರ ಪೊಲೀಸ್ ಅಧೀಕ್ಷಕರಾದ ರಾಮಚಂದ್ರಪ್ಪ, ಡಿ.ಎಸ್.ರಾಜೇಂದ್ರ, ರಾಮನಗರ ಉಪವಿಭಾಗ ಆರಕ್ಷಕ ಉಪಾಧೀಕ್ಷಕ ಶ್ರೀನಿವಾಸ್ , ಚನ್ನಪಟ್ಟಣ ಉಪ ವಿಭಾಗ ಆರಕ್ಷಕ ಉಪಾಧೀಕ್ಷಕ ಕೆ.ಸಿ.ಗಿರಿ, ಮಾಗಡಿ ಉಪವಿಭಾಗ ಆರಕ್ಷಕ ಉಪಾಧೀಕ್ಷಕ ಎಂ.ಪ್ರವೀಣ್ , ರಾಮನಗರ ಸಿಇಎನ್ ಪೊಲೀಸ್ ಠಾಣೆ ಆರಕ್ಷಕ ಉಪಾಧೀಕ್ಷಕ ಕೆಂಚೇಗೌಡ, ಕೆ.ಆರ್ .ರಘು ಉಪಸ್ಥಿತರಿದ್ದರು.24ಕೆಆರ್ ಎಂಎನ್ 3,4.ಜೆಪಿಜಿ
3.ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಪೊಲೀಸರು ನಡೆಸಿಕೊಟ್ಟ ಪೌರಾಣಿಕ ನಾಟಕ ಪ್ರದರ್ಶನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಉದ್ಘಾಟಿಸಿದರು.4. ಪೊಲೀಸರಿಂದ ಪೌರಾಣಿಕ ನಾಟಕ ಪ್ರದರ್ಶನ.