ಕನ್ನಡಪ್ರಭ ವಾರ್ತೆ ನಾಲತವಾಡ
ಚಿಮ್ಮಲ್ಲಗಿ ಹಾಗೂ ನಾಗರಬೆಟ್ಟ ಏತ ನೀರಾವರಿ ಕಾಲುವೆ ಕಾಮಗಾರಿ ಪೂರ್ಣಗೊಳಿಸಿ ಕಟ್ಟಕಡೆಯ ರೈತರಿಗೆ ನೀರು ಹರಿಯುವಂತೆ ಮಾಡಬೇಕು ಎಂದು ಶಿವಾಂನಂದ ವಾಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ರೈತರು ಸತ್ಯಾಗ್ರಹ ಕೈಬಿಡಬೇಕು ಎಂದು ಅಧಿಕಾರಿಗಳ ಮನವಿ ಮಾಡಿದರು ಬೇಡಿಕೆ ಈಡೇರುವತನಕ ಹೋರಾಟ ಬಿಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಕೆಬಿಜೆಎನ್‌ಎಲ್ ಅಧಿಕಾರಿಗಳು ಧರಣಿನಿರತರ ಜೊತೆ ಸಂಧಾನ ಸಭೆ ನಡೆಸಲು ಮುಂದಾದರು. ಈ ವೇಳೆ ಬೇಡಿಕೆ ಈಡೇರಿಕೆ ಸಂಬಂಧ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ಚಟಾಪಟಿ ನಡೆಸಿದ ಘಟನೆಯೂ ನಡೆಯಿತು.ಪಟ್ಟಣದ ಅಮರೇಶ್ವರ ದೇವಸ್ಥಾನದ ಬಳಿಯ ಕಾಲುವೆ ಕಾಮಗಾರಿ ಶೀಘ್ರದಲ್ಲೆ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಇದು. ಕಳೆದ 13ವರ್ಷಗಳಿಂದ ಕಾಲುವೆ ಪೂರ್ಣಗೊಳಿಸಿಲ್ಲ, ಈಗ ಏನು ಪೂರೈಸುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೇ, ಟೆಂಡರ್ ದಾಖಲೆ ನೀಡುವಂತೆ ಪಟ್ಟು ಹಿಡಿದರು.ರೈತರ ಪ್ರಮುಖ ಬೇಡಿಕೆ ಜನೆ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ಸಂಗಣ್ಣ ಕುಳಗೇರಿ, ಮಲ್ಲು ಗಂಗನಗೌಡ್ರ, ಜಿ.ಮಹಾಂತೇಶ, ಚಂದ್ರಶೇಖರ್ ಗಂಗನಗೌಡ್ರ, ಮಹಾಂತೇಶ ಮೆನದಾಳಮಠ, ಮಲ್ಲಣ್ಣ ಮಳ್ಳೆತ್ತಿ, ಮುತ್ತಣ್ಣ ಯರಗೋಡಿ, ಅಮರೇಶ ವಡಗೇರಿ ಬಾಬು ಹಾದಿಮನಿ ಆಕ್ರೋಶ ವ್ಯಕ್ತಪಡಿಸಿದರು. ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕನಸು ಕಂಡಿದ್ದ ಸುಮಾರು ಹಳ್ಳಿಯ ರೈತರ ಪಾಡೇನು ಎಂದು ಪ್ರಶ್ನಿಸಿದ ಅವರು, ಆಲಮಟ್ಟಿ ಕಚೇರಿಯವರೆಗೆ ಲಾರಿಗಟ್ಟಲೇ ರೈತರು ತೆರಳಿ ವಿನಂತಿ ಮಾಡಿಕೊಂಡರೂ ಬರೀ ಗೊಳ್ಳು ಭರವಸೆ ನೀಡಿ ಬಾಯಿಗೆ ತುಪ್ಪ ಸವರಿ ಮರಳಿಸಿದ್ದೀರಿ, ಮರು ಟೆಂಡರ್ ಕರೆಯಲಾಗಿದೆ ಎಂದು ಹೇಳುತ್ತೀರಿ, ರೈತರ ಹೊಟ್ಟೆ ಉರಿಯುತ್ತಿದೆ ಹಲವು ರೈತರು ಕಣ್ಣೀರಾಕುತ್ತಿದ್ದಾರೆ. ನಿಮ್ಮ ಗೊಳ್ಳು ಭರವಸೆ ಬೇಡ ಮರಳಿ ಮನೆಗೆ ಹೊರಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಅಧಿಕಾರಿ ಬಂದ ನಂತರ ಹೋರಾಟ ಅಂತ್ಯ:
ಈ ವೇಳೆ ಪಪಂ ಅಧ್ಯಕ್ಷ ಪೃಥ್ವಿರಾಜ ನಾಡಗೌಡ, ಗಣ್ಯರಾದ ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ಸಿ.ಬಿ.ಅಸ್ಕಿ, ರಾಯಣಗೌಡ ತಾತರೆಡ್ಡಿ, ಉಮರಫಾರುಕ್ ಮೂಲಿಮನಿ, ಮಲ್ಲು ತಳವಾರ, ಸಿದ್ದಣ್ಣ ಕಟ್ಟಿಮನಿ ಕಾಲುವೆ ಕಾಮಗಾರಿ ಬಗ್ಗೆ ಶಾಸಕರಿಗೆ ತುರ್ತು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಅಧಿಕಾರಿ ಎಷ್ಟು ದಿನಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡುತ್ತೀರಿ ಎಂದು ಸ್ಪಷ್ಟ ಉತ್ತರ ನೀಡಬೇಕು. ಈ ವೇಳೆ ಆರ್.ಎಲ್ ಹಳ್ಳೂರ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಒಂದು ತಿಂಗಳ ಕಾಲಾವಕಾಶ ನೀಡಿದ್ದು, ಅದರ ಒಳಗಾಗಿ ಎಲ್ಲ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು. ಹೋರಾಟಗಾರರು ಅಧಿಕಾರಿಯ ಭರವಸೆಗೆ ಒಪ್ಪಿದ್ದು, ಜಮೀನು ಕಳೆದುಕೊಂಡ ರೈತರಿಗೆ ಇನ್ನು ಅವಾರ್ಡ್ ಕಾಪಿ ಕೊಟ್ಟಿಲ್ಲ ಅದರ ಬಗ್ಗೆ ಹೇಳಿ ಎಂದಾಗ ಆರ್ ಆರ್ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.ಇದರಿಂದ ರೈತರು ಸಿಟ್ಟಾಗಿ ನಮ್ಮ ಪ್ರಮುಖ ಬೇಡಿಕೆಯನ್ನು ಪರಿಹರಿಸುವ ಎಲ್ಲ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಾವು ಧರಣಿ ಕೈಬಿಡುವದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಪ್ರತಿಭಟನಾಕಾರರ ಹೀಗೆ ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳು ಬಂದ ದಾರಿಗೆ ಸುಂಕ ಇಲ್ಲ ಎಂದು ತಿಳಿದು ಸ್ಥಳದಿಂದ ಕಾಲ್ಕಿತ್ತರು.ಬಂದೋಬಸ್ತ್: ಧರಣಿ ಸ್ಥಳದಲ್ಲಿ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಹೋರಾಟಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಎಸ್.ಆರ್.ನಾಯಕ, ತಾಳಿಕೋಟಿಯ ಪಿಎಸ್‌ಐ ಮಹ್ಮದತೌಶಿಪ್ ಸಂಕನಾಳ, ಪಿಎಸ್‌ಐ ಎಸ್.ಆರ್.ನಾಯಕ, ಎಎಸ್‌ಐ ಎ.ವೈ.ಸಾಲಿ, ಬಾಗೇವಾಡಿ, ಎಸ್‌ಐ ಹೋಕಳೆ, ಎಸೈ ಪವಾರ್ ಸೇರಿದಂತೆ 19 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.----------------------------------------------