ಜೋಳಿಗೆಯೇ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ ಲೋಕಾರ್ಪಣೆ ಇಂದು

KannadaprabhaNewsNetwork |  
Published : Sep 14, 2025, 01:04 AM IST
(13ಎನ್.ಆರ್.ಡಿ4 ಚಿದಾನಂದ ಶ್ರೀಗಳ ಹಾಗೂ ಮಠದ ಪೋಟೋ.) | Kannada Prabha

ಸಾರಾಂಶ

ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಹಲವು ಪವಾಡಗಳನ್ನು ಮಾಡಿದ ಮಹಾಪುರುಷ ಸದ್ಗುರು ಚಿದಾನಂದ ಶ್ರೀಗಳ ಜೀವನ ಚರಿತ್ರೆ "ಜೋಳಿಗೆಯೇ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ " ಭಾನುವಾರ (ಸೆ.14) ಲೋಕಾರ್ಪಣೆಗೊಳ್ಳಲಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನ ಹದಲಿ ಗ್ರಾಮದಲ್ಲಿ ಹಲವು ಪವಾಡಗಳನ್ನು ಮಾಡಿದ ಮಹಾಪುರುಷ ಸದ್ಗುರು ಚಿದಾನಂದ ಶ್ರೀಗಳ ಜೀವನ ಚರಿತ್ರೆ "ಜೋಳಿಗೆಯೇ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ " ಭಾನುವಾರ (ಸೆ.14) ಲೋಕಾರ್ಪಣೆಗೊಳ್ಳಲಿದೆ.

ಭಾನುವಾರ (ಸೆ.14ರ) ಬೆಳಗ್ಗೆ ಶ್ರೀಗಳವರ ಕೃರ್ತ ಗದ್ದುಗೆಗೆ ಮಹಾರುದ್ರಾಭಿಷೇಕ ಜರುಗಲಿದೆ. 9 ಗಂಟೆಗೆ ಲಿಂ. ಶ್ರೀ ಸದ್ಗುರು ಚಿದಾನಂದ ಶ್ರೀಗಳ ಭಾವಚಿತ್ರ ಮೆರವಣಿಗೆ ರಾಜಬೀದಿಯಲ್ಲಿ ಡೊಳ್ಳು, ಕರಡಿ, ಭಜನಾ ಮೇಳ ಹಾಗೂ 101ಜನ ಸುಮಂಗಲೆಯರ ಕುಂಭಮೇಳದೊಂದಿಗೆ ನಡೆಯಲಿದೆ.

ಸಂಜೆ 7 ಗಂಟಿಗೆ ಮಠದ ಆವರಣದಲ್ಲಿ ಸದ್ಗುರು ಚಿದಾನಂದ ಶ್ರೀಗಳ 41ನೇ ಪುಣ್ಯಾರಾಧನೆ ನಿಮಿತ್ತ ವಿ.ಕೆ. ಪಾಟೀಲ ರಚಿಸಿದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಪತ್ರಿವನ ಮಠದ ಪರಮಪೂಜ್ಯ ಶ್ರೀಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಚಿಕ್ಕೋಡಿಯ ಪ.ಪೂ ಶ್ರೀಗುರು ಓಂಕಾರೇಶ್ವರ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ಶ್ರೀ ತೋಂಟದಾರ್ಯ ಮಠದ ಪ.ಪೂ ಶಾಂತಲಿಂಗ ಶ್ರೀಗಳು ವಹಿಸಿಕೊಳ್ಳಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಸಿ. ಪಾಟೀಲ, ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ, ವಿಜಯಪುರದ ಡಿ.ವೈ.ಎಸ್.ಪಿ ಬಿ.ಎಫ್. ಯಲಿಗಾರ, ಗ್ರಂಥಕರ್ತರಾದ ವಿ.ಕೆ. ಪಾಟೀಲ, ಪ್ರಲಾದ ಮುಂಡಾಸದ, ವಿರುಪಾಕ್ಷಪ್ಪ ಪಟೇಲ, ಜಯಪ್ಪ ಸಿಡಕಷ್ಟ, ಎಚ್.ವಿ. ಶಲವಡಿ, ಜಿ.ಕೆ. ಶಿವಕುಮಾರ ಪಟೀಲ, ಭೀಮನಗೌಡ ಹಿರೇಗೌಡ್ರ, ಬಸವರಾಜ ಹುಡೇದ, ಅಜ್ಜಪ್ಪಗೌಡ ಅಲ್ಲಪ್ಪಗೌಡ್ರ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.ಶ್ರೀಗಳ ಪರಂಪರೆ

ಆತ್ಮೋದ್ಧಾರ ತನ್ಮೂಲಕ ಲೋಕೋದ್ಧಾರಗೈದ ಮಹಾಪುರುಷರ ಪಂಕ್ತಿಯಲ್ಲಿ ಹದಲಿಯ ಸದ್ಗುರು ಚಿದಾನಂದ ಸ್ವಾಮಿಗಳು ಲೀಲಾ ಪುರುಷರು, ಮಹಿಮಾ ಶಾಲಿಗಳು, ಭರ್ಗೋ ಸಾಕ್ಷಾತ್ ನರಾಕೃತಿ ಎನ್ನುವಂತೆ ನರರನ್ನು ಉದ್ಧರಿಸಲು ಈ ಧರೆಯಲ್ಲಿ ಗುರುವಾಗಿ ಅವತರಿಸಿದ ಪರಮಾತ್ಮ ಸ್ವರೂಪಿಗಳು.

ಶ್ರೀಗಳು 10-06-1914ರಲ್ಲಿ ಚಿತ್ರದುರ್ಗ ಜಿಲ್ಲೆ ದಾವಣಗೆರೆ ತಾಲೂಕು ಗುಡಾಳು ಎಂಬ ಗ್ರಾಮದಲ್ಲಿ ಜನಿಸಿದರು. ದಾವಣಗೆರೆಯಲ್ಲಿ ಅಜ್ಜಂಪುರ ಮಲ್ಲಾರಾಧ್ಯರಿಂದ ಮಂತ್ರ ದೀಕ್ಷೆ ಪಡೆದರು. ಮುಂದೆ ಅಜ್ಜಂಪುರದ ಪ್ರೋ.ಬ್ರ ಶಂಕರಾನಂದ ಮಹಾಸ್ವಾಮಿಗಳವರಲ್ಲಿ ಗುರುಸೇವೆ ಮಾಡಿ ಗುರುಕೃಪೆ ಹೊಂದಿ ಖಾವಿ ದೀಕ್ಷೆ ಪಡೆದು, ಉತ್ತರ ಕರ್ನಾಟಕದಲ್ಲಿ ಸಂಚಾರ ಹೊರಟು ಗದುಗಿನ ಜಗದ್ಗುರು ಶಿವಾನಂದ ಮಠ ಹಾಗೆಯೇ ಹುಬ್ಬಳ್ಳಿಯ ಜಗದ್ಗುರು ಸಿದ್ಧಾರೂಢರ ಕರ್ತೃ ಗದ್ದುಗೆಯ ದರ್ಶನ ಪಡೆದ ಪುನೀತರಾದರು.

ಹದಲಿಗೆ ದಯಮಾಡಿಸಿದ ಶ್ರೀಗಳು ಭಕ್ತರ ಇಷ್ಟಾರ್ಥದಂತೆ ಅಲ್ಲಿಯೇ ನೆಲೆನಿಲ್ಲಲು ಶಿವಯೋಗಾಶ್ರಮ ನಿರ್ಮಿಸಿದರು. ಇಷ್ಟಲಿಂಗ ಪೂಜೆ ಮತ್ತು ನಿಜಗುಣ ಶಿವಯೋಗಿಗಳ ಶಾಸ್ತ್ರ ಪ್ರವಚನ ಅವರ ಉಸಿರಾಗಿತ್ತು. ಅಲ್ಲಲ್ಲಿ ಅನೇಕ ಶಿಷ್ಯ ಬಳಗವನ್ನು ಹೊಂದಿ ದಿನಾಂಕ 18-09-1984ರಂದು ಬಯಲೊಳಗೆ ಬಯಲಾದರು.

ನಾಡಿನಲ್ಲಿ ಸಂಚಾರ ಮಾಡುತ್ತ ಬಂದು ಹದಲಿ ಗ್ರಾಮದಲ್ಲಿ ಸದ್ಗುರು ಚಿದಾನಂದ ಶ್ರೀಗಳು ನೆಲಸಿ ಹಲವಾರು ಪವಾಡ ಮಾಡಿ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡಿ, ಭಕ್ತರಿಗೆ ಆಧ್ಯಾತ್ಮ ಜ್ಞಾನ ನೀಡಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ನರಗುಂದ ತಾಲೂಕು ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜನ ಹಿರೇಮಠ ಹೇಳಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ