ರಾಮನಗರ: ರಾಮನಗರದ ತ್ಯಾಜ್ಯವನ್ನು ಅಚ್ಚಲು ಗ್ರಾಮದ ಬಳಿ ಅರ್ಕಾವತಿ ನದಿ ದಡದಲ್ಲಿ ವಿಲೇವಾರಿ ಮಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ ಎಂಬ ಬ್ಯಾನರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅರ್ಕಾವತಿ ನದಿ ದಡದಲ್ಲಿ ಕಸ ವಿಲೇವಾರಿ ಮಾಡದಂತೆ ಹಲವು ಬಾರಿ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲಿದ್ದೇವೆ ಎಂಬ ಬರಹ ಬ್ಯಾನರ್ ನಲ್ಲಿದೆ.ರಾಮನಗರ ಟೌನಿನಲ್ಲಿ ನಗರಸಭೆ ಪೌರಕಾರ್ಮಿಕರು ಸಂಗ್ರಹಿಸಿದ ತ್ಯಾಜ್ಯವನ್ನು ಅಚ್ಚಲು ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಅರ್ಕಾವತಿ ನದಿ ದಡದಲ್ಲಿ ವಿಲೇವಾರಿ ಮಾಡಿ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ ಒಂದು ಕಿಲೋ ಮೀಟರ್ ಗೂ ಹೆಚ್ಚು ದೂರ ದಟ್ಟವಾದ ಹೊಗೆ ಆವರಿಸುತ್ತದೆ. ಜೊತೆಗೆ ಸ್ಥಳೀಯರಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಅಚ್ಚಲು ಗ್ರಾಮಸ್ಥರು.
ನಮ್ಮ ಜನರ ಆರೋಗ್ಯ ನಮ್ಮ ಹಕ್ಕು? ಜೀವವಿದ್ದರೆ ಮತದಾನ ಆರೋಗ್ಯವಿದ್ದರೆ ರಾಜಕೀಯ? ಎಂಬ ಘೋಷಣೆ ಹೊರಡಿಸಿರುವ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಳೆದ 15 ವರ್ಷಗಳಿಂದಲೂ ಗ್ರಾಮದಲ್ಲಿ ಇದೇ ಸಮಸ್ಯೆ ಎದುರಾಗುತ್ತಿದೆ. ರಾಮನಗರ ನಗರ ವ್ಯಾಪ್ತಿಯ ತ್ಯಾಜ್ಯವನ್ನು ತಂದು ಅರ್ಕಾವತಿ ನದಿ ಪಕ್ಕದಲ್ಲಿ ಹಾಕಿ ಬೆಂಕಿ ಇಡುತ್ತಿದ್ದಾರೆ. ಇದರ ಹೊಗೆ ಗ್ರಾಮದ ಸುತ್ತಮುತ್ತಲು ಹರಡುತ್ತಿದೆ ಎಂದು ಗ್ರಾಪಂ ಸದಸ್ಯರೊಬ್ಬರು ತಿಳಿಸಿದರು.ಈ ಹೊಗೆಯಿಂದ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಒಂದು ಕಡೆ ಅರ್ಕಾವತಿ ನದಿಗೆ ತ್ಯಾಜ್ಯ ಸುರಿದು ನದಿ ಮಲಿನವಾಗುತ್ತಿದೆ. ಮತ್ತೊಂದು ಕಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಹೊಗೆಯಿಂದ ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಸಮಸ್ಯೆ ಬಗೆಹರಿಸಿಕೊಡುವಂತೆ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೂ, ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಪಂ ಸದಸ್ಯರು ಹೇಳಿದರು.ಬಾಕ್ಸ್ ..............
ಚುನಾವಣಾ ಬಹಿಷ್ಕಾರಕ್ಕೆ ವಿರೋಧ:ಅಚ್ಚಲು ಗ್ರಾಮ ಸಮೀಪದ ಅರ್ಕಾವತಿ ನದಿ ದಡದಲ್ಲಿ ಕಸ ವಿಲೋವಾರಿ ಮಾಡಿ ಬೆಂಕಿ ಇಡುತ್ತಿರುವುದು ಹೊಸ ಸಮಸ್ಯೆ ಅಲ್ಲ. ಇದರಿಂದ ಮುಕ್ತಿ ದೊರಕಿಸಿಕೊಡುವಂತೆ 15 ವರ್ಷಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಆಗ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಈಗ ಕಾಂಗ್ರೆಸ್ ನ ಇಕ್ಬಾಲ್ ಹುಸೇನ್ ರವರು ಶಾಸಕರಾಗಿದ್ದಾರೆ ಎಂಬ ಕಾರಣಕ್ಕೆ ಜೆಡಿಎಸ್ - ಬಿಜೆಪಿ ಕೆಲ ಕಾರ್ಯಕರ್ತರು ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವ ಕರೆಕೊಟ್ಟಿದ್ದಾರೆ. ಇದು ಎರಡು ಪಕ್ಷಗಳ ಕಾರ್ಯಕರ್ತರ ನಿರ್ಧಾರವೇ ಹೊರತು, ಗ್ರಾಮಸ್ಥರ ನಿರ್ಧಾರ ಅಲ್ಲ ಎಂದು ಗ್ರಾಮದ ಮುಖಂಡರೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಕೋಟ್ ................ಪ್ರತಿನಿತ್ಯ ತ್ಯಾಜ್ಯಕ್ಕೆ ಬೆಂಕಿ ಇಡುತ್ತಿರುವುದರಿಂದ ಅದರ ಹೊಗೆ ಸೇವನೆ ಮಾಡಿದರೆ, ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಮಸ್ಯೆ ಬಗೆಹರಿಸಿಕೊಡುವಂತೆ ಆಗ್ರಹಿಸಿ ಈಗಾಗಲೇ ಸಂಬಂಬಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
-ಗೋಪಾಲ್, ಗ್ರಾಪಂ ಸದಸ್ಯ, ಹುಣಸನಹಳ್ಳಿ, ರಾಮನಗರ.ಕೋಟ್ ................
ಸಮಸ್ಯೆ ಬಗೆಹರಿಸುವ ಸಂಬಂಧ ರಾಮನಗರ ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸುತ್ತಿದ್ದೇವೆ. ಗ್ರಾಮಸ್ಥರಲ್ಲಿ ಮತ ಬಹಿಷ್ಕಾರ ಮಾಡದಂತೆ ಮನವಿ ಮಾಡಿಕೊಳ್ಳುತ್ತೇವೆ.-ಶಿವಾನಂದ ಮೂರ್ತಿ, ಅಪರ ಜಿಲ್ಲಾಧಿಕಾರಿ, ರಾಮನಗರ. 19ಕೆಆರ್ ಎಂಎನ್ 11,12,13.ಜೆಪಿಜಿ
11.ಅಚ್ಚಲು ಗ್ರಾಮ ವ್ಯಾಪ್ತಿಯಲ್ಲಿ ಅರ್ಕಾವತಿ ನದಿ ಬಳಿ ಸುರಿದಿರುವ ಕಸಕ್ಕೆ ಬೆಂಕಿ ಹಾಕಿರುವುದು.12. ಗ್ರಾಮದ ಸುತ್ತಮುತ್ತಲು ಆವರಿಸುವ ದಟ್ಟವಾದ ಹೊಗೆ.
13. ಲೋಕಸಭಾ ಚುನಾವಣೆ ಬಹಿಷ್ಕಾರ ಕುರಿತು ಬ್ಯಾನರ್.