ಕನ್ನಡಪ್ರಭ ವರ್ತೆ ಚಿಕ್ಕಮಗಳೂರು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೋಷಿತರು, ಬಡವರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಶೋಷಿತ ಸಮುದಾಯವನ್ನು ಸಮಾಜದ ಮುನ್ನಲೆಗೆ ತರಬೇಕು ಎಂಬುದು ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ತಾಲೂಕಿನ ಕಳಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಅವಶ್ಯಕತೆ ಇದೆ ಎಂದು ಚುನಾವಣಾ ಪೂರ್ವದಿಂದಲೂ ಹೇಳಲಾಗುತ್ತಿತ್ತು. ತಾಲ್ಲೂಕಿಗೆ ಮೂರು ಆಂಬ್ಯುಲೆನ್ಸ್ ಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಕಳಸಾಪುರ, ನಿಡಘಟ್ಟ ಮತ್ತು ಕೈಮರಕ್ಕೆ ತಲಾ ಒಂದರಂತೆ ನೀಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಈ ಗ್ಯಾರಂಟಿಗಳಿಗಾಗಿ ವಾರ್ಷಿಕವಾಗಿ ₹59 ಸಾವಿರ ಕೋಟಿ ವ್ಯಯ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಸರ್ಕಾರದಲ್ಲಿ ಹಣ ಇಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಈಗ ಅಭಿವೃದ್ಧಿಗೆ ಹಣ ಮೀಸಲಿಡುವ ಮೂಲಕ ಉತ್ತರ ನೀಡಲಾಗಿದೆ. ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಿ ಆಧ್ಯತೆಗೆ ಅನುಗುಣವಾಗಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.ಉತ್ತಮವಾದ ಆರೋಗ್ಯ ಇದ್ದರೆ, ಏನು ಬೇಕಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಆಕಸ್ಮಿಕವಾಗಿ ಆರೋಗ್ಯ ತೊಂದರೆಗಳಿಗೆ ತುರ್ತು ಚಿಕಿತ್ಸೆಗಾಗಿ ನಗರಕ್ಕೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳನ್ನು ನೀಡುವ ಮೂಲಕ ನಾಗರೀಕರ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಕಳಸಾಪುರ ಭಾಗದ ಮೂರು ದೇವಾಲಗಳ ಅಭಿವೃದ್ಧಿಗೆ ಸರ್ಕಾರದಿಂದ ಹಣ ಮಂಜೂರು ಮಾಡಲಾಗಿದೆ. ಸಿಸಿ ರಸ್ತೆ ನಿರ್ಮಾಣಕ್ಕೆ ₹30 ಲಕ್ಷ ಬಿಡುಗಡೆ ಮಾಡಲಾಗಿದ್ದು, ಜೊತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಬೇಕೆಂಬ ಗುರಿ ಹೊಂದಲಾಗಿದೆ ಎಂದರು.ಕಳಸಾಪುರ ಕೆರೆ, ತಿಮ್ಮರಾಯನ ಕೆರೆ, ಈಶ್ವರಹಳ್ಳಿ ಕೆರೆ, ಮಾಚೇನಹಳ್ಳಿ ಕೆರೆಗಳು ತುಂಬಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿದ ಪರಿಣಾಮ ಬಯಲು ಭಾಗದ ಬಹುತೇಕ ಕೆರೆಗಳು ತುಂಬಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರು ಮಾಚೇನಹಳ್ಳಿ ಗೌರಿ ಕೆರೆಗೆ ಭಾಗಿನ ಅರ್ಪಿಸಿದರು. ದೊಡ್ಡಮ್ಮ ದೇವಿ, ಕರಿಯಮ್ಮ ದೇವಿ, ನೂತನ ದೇವಾಲಯಕ್ಕೆ ಗುದ್ದಲಿ ಪೂಜೆ ನೇರವೇರಿಸಿದರು.ಈ ಸಂದರ್ಭದಲ್ಲಿ ಕಳಸಾಪುರ ಗ್ರಾಪಂ ಅಧ್ಯಕ್ಷೆ ರಾಧಮ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಡಾ.ಕಾರ್ತಿಕ್, ಗ್ರಾಮಸ್ಥರುಗಳಾದ ಕೆಂಗೇಗೌಡ, ಲೋಕೇಶ್, ಶ್ರೀಧರ್, ಹರ್ಷದ್ ಉಪಸ್ಥಿತರಿದ್ದರು.