ಕನ್ನಡಪ್ರಭ ವಾರ್ತೆ ಯಾದಗಿರಿ
ಬಿಜೆಪಿ ಅಭ್ಯರ್ಥಿಯಾಗಿರುವ ರಾಜೂಗೌಡರು ಮೂರು ಬಾರಿ (2004, 2009 ಹಾಗೂ 2018) ಶಾಸಕರಾಗಿದ್ದವರು, 2012 ರಲ್ಲಿ ಜಗದೀಶ ಶೆಟ್ಟರ್ ಸಚಿವ ಸಂಪುಟದಲ್ಲಿ ಸದಸ್ಯರಾಗಿದ್ದರು. ಸಣ್ಣ ಕೈಗಾರಿಕೆ ಖಾತೆ ಇವರಿಗೆ ವಹಿಸಲಾಗಿತ್ತು. 2020ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರೂ ಆಗಿದ್ದರು.
ಶಾಸಕರಾಗಿದ್ದ ದಿ.ರಾಜಾ ವೆಂಕಟಪ್ಪ ನಾಯಕ್ (ಆರ್‌ವಿಎನ್) ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್ (ಆರ್‌ವಿಎನ್) ಅವರೇ ತಮ್ಮ ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್ ಇತ್ತೀಚೆಗೆ ಅಧಿಕೃತವಾಗಿ ಘೋಷಿಸಿದೆ. ಖರ್ಗೆ ಕುಟುಂಬದ ನಿಷ್ಠಾವಂತ ರಾಜಾ ವೆಂಕಟಪ್ಪ ನಾಯಕ್‌ರ ಪುತ್ರನಿಗೆ ಪಟ್ಟ ಕಟ್ಟುವ ಕಾಂಗ್ರೆಸ್ ಪ್ರಯತ್ನ ಇದಾಗಿದೆ.2023ರ ವಿಧಾನಸಭೆ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ್ ಅವರು ರಾಜೂಗೌಡರನ್ನು 25 ಸಾವಿರ ಮತಗಳ ಅಂತರದಿಂದ ಸೋಲುಣಿಸಿದ್ದರು. ನಾಲ್ಕು ಬಾರಿ (1994, 1999, 2013 ಹಾಗೂ 2023) ಶಾಸಕರಾಗಿ ಆಯ್ಕೆಯಾಗಿದ್ದ ರಾಜಾ ವೆಂಕಟಪ್ಪ ನಾಯಕರಿಗೆ ಹಾಲಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದೀಗ ಅವರ ಅಕಾಲಿಕ ನಿಧನದಿಂದಾಗಿ ನಡೆಯುವ ಉಪ ಚುನಾವಣೆಯಲ್ಲಿ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕಗೆ ಕಾಂಗ್ರೆಸ್, ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದೆ.
ಮಾಜಿ ಸಚಿವ ರಾಜೂಗೌಡ ವರ್ಸೆಸ್ ಜ್ಯೂ.ಆರ್‌ವಿಎನ್
46 ವರ್ಷಗಳ ವಯಸ್ಸಿನ ರಾಜೂಗೌಡರು ತಮ್ಮ 21ನೇ ವಯಸ್ಸಿಗೆ ಕೊಡೇಕಲ್ ಜಿಪಂ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದವರು. ಆಗ ಇವರಿಗೆ ಗುರುವಾಗಿದ್ದವರು ರಾಜಾ ವೆಂಕಟಪ್ಪ ನಾಯಕ್.
ಈಗ, ಸುರಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಾ ವೆಂಕಟಪ್ಪ ನಾಯಕರ ಪುತ್ರ 42 ವರ್ಷ ವಯಸ್ಸಿನ ರಾಜಾ ವೇಣುಗೋಪಾಲ ನಾಯಕ್ ಹಾಗೂ 47 ವರ್ಷ ವಯಸ್ಸಿನ ರಾಜೂಗೌಡರ ಮಧ್ಯೆ ಚುನಾವಣಾ ಕದನ ಕುತೂಹಲ ಕೆರಳಿಸಿದೆ.
ಆದರೆ, ಪ್ರಧಾನಿ ಮೋದಿ ಅಲೆ, ಬಿಜೆಪಿ ಸರ್ಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ತಮಗೆ ಫಲಪ್ರದವಾಗಲಿದೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಬಿಜೆಪಿ ಅವಧಿಯಲ್ಲಿನ ಕಾಮಗಾರಿಗಳೇ ತಮಗೆ ಶ್ರೀರಕ್ಷೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಹಾಗೆಯೇ, ಲೋಕಸಭೆ ಚುನಾವಣೆಯೂ ಏಕಕಾಲಕ್ಕಿರುವುದರಿಂದ, ಕ್ರಾಸ್ ವೋಟಿಂಗ್‌ಗಳ ನಿರೀಕ್ಷೆ ಸಹಜ ಎನ್ನಲಾಗುತ್ತಿದೆ.