ಕೊಡಗಿನ ಮುಂಗಾರಿನ ಸೊಬಗು ಚೇಲಾವರ ಜಲಪಾತ

KannadaprabhaNewsNetwork | Published : Jun 29, 2024 12:39 AM

ಸಾರಾಂಶ

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ನಾಪೋಕ್ಲು, ಕಕ್ಕಬ್ಬೆ ಮರ್ಗವಾಗಿ ಸುಮಾರು ೩೫ ಕಿ.ಮೀ. ಕ್ರಮಿಸಿದರೆ ಚೆಯ್ಯಂಡಾಣೆ ಗ್ರಾಮ ಸಿಗುತ್ತದೆ. ಅಲ್ಲಿಂದ ೩ ಕಿ.ಮೀ. ದೂರದಲ್ಲಿ ಚೇಲವಾರ ಗ್ರಾಮದಲ್ಲಿ ಆಮೆಪಾರೆ ಎಂಬಲ್ಲಿ ಚೇಲಾವರ ಜಲಪಾತ ಸಿಗುತ್ತದೆ. ಬೆಟ್ಟಗುಡ್ಡಗಳ ನಡುವೆ ಕಬ್ಬೆಬೆಟ್ಟದ ಸಂಧಿಯಿಂದ ಸುಮಾರು ೯೦ ಅಡಿಗಳಷ್ಟು ಎತ್ತರದಿಂದ ಸುಂದರ ಪರಿಸರದ ರುದ್ರ ರಮಣೀಯ ಹಾಲ್ನೋರೆಯಂತೆ ದುಮುಕುವ ಜಲಧಾರೆಯೇ ಚೇಲವಾರ ಜಲಪಾತ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಚುರುಕುಗೊಂಡ ಮುಂಗಾರು ಮಳೆಗೆ ಬೆಟ್ಟ ಶ್ರೇಣಿಗಳಲ್ಲಿ ಜಲಧಾರೆಗಳು ಈಗ ಮೈದುಂಬಿ ಹರಿಯುತ್ತಿವೆ. ಕೊಡಗಿನ ಆಕರ್ಷಕ ಚೇಲಾವರ ಜಲಪಾತ ಮುಂಗಾರಿನ ಪ್ರಧಾನ ಆಕರ್ಷಣೆಯೂ ಹೌದು.

ಜಿಲ್ಲೆಯ ಜಲಧಾರೆಗಳ ಪೈಕಿ ಕೆಲವು ಬಂಡೆಗಳ ಮೇಲಿನಿಂದ ಧುಮ್ಮಿಕ್ಕಿದರೆ ಮತ್ತೆ ಕೆಲವು ಕೊರಕಲಿನ ಹಾದಿಯಲ್ಲಿ ಬೆಳ್ನೊರೆಯಾಗಿ ಸಾಗಿ ತಳ ಸೇರುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗಿರಿಶಿಖರಗಳಿಂದ ಸಾಗಿ ಬರುವ ಶುಭ್ರ ಬೆಳ್ನೊರೆ ಎತ್ತರದ ಬೆಟ್ಟದಿಂದ ಜಾರಿ ಕಣಿವೆಗಳೆಡೆಯಲ್ಲಿ ಹಾದು ಹೋಗುವ ದೃಶ್ಯ ನಯನಮನೋಹರ. ಮಳೆಯ ಭೋರ್ಗರೆತದೊಂದಿಗೆ ಕಾಡಿನ ನಡುವೆ ಹತ್ತಾರು ಜಲಪಾತಗಳು ಮನಸೆಳೆಯುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ಚೇಲವಾರ ಜಲಪಾತ ಒಂದು.

ನಾಪೋಕ್ಲು-ಕಕ್ಕಬ್ಬೆ ಮಾರ್ಗ:

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ನಾಪೋಕ್ಲು, ಕಕ್ಕಬ್ಬೆ ಮರ್ಗವಾಗಿ ಸುಮಾರು ೩೫ ಕಿ.ಮೀ. ಕ್ರಮಿಸಿದರೆ ಚೆಯ್ಯಂಡಾಣೆ ಗ್ರಾಮ ಸಿಗುತ್ತದೆ. ಅಲ್ಲಿಂದ ೩ ಕಿ.ಮೀ. ದೂರದಲ್ಲಿ ಚೇಲವಾರ ಗ್ರಾಮದಲ್ಲಿ ಆಮೆಪಾರೆ ಎಂಬಲ್ಲಿ ಚೇಲಾವರ ಜಲಪಾತ ಸಿಗುತ್ತದೆ.

ಬೆಟ್ಟಗುಡ್ಡಗಳ ನಡುವೆ ಕಬ್ಬೆಬೆಟ್ಟದ ಸಂಧಿಯಿಂದ ಸುಮಾರು ೯೦ ಅಡಿಗಳಷ್ಟು ಎತ್ತರದಿಂದ ಸುಂದರ ಪರಿಸರದ ರುದ್ರ ರಮಣೀಯ ಹಾಲ್ನೋರೆಯಂತೆ ದುಮುಕುವ ಜಲಧಾರೆಯೇ ಚೇಲವಾರ ಜಲಪಾತ. ತಡಿಯಂಡ ಮೋಳ್ ಬೆಟ್ಟ ಸಾಲಿನಲ್ಲಿ ಬರುವ ಕಬ್ಬೆಬೆಟ್ಟದಿಂದ ಈ ಜಲಧಾರೆ ಧುಮುಕುತ್ತಿದ್ದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಪಕ್ಷಿಗಳ ಚಿಲಿಪಿಲಿ ನಾದದ ನಡುವೆ ಹಾಲ್ನೊರೆಯಂತೆ ಸುಮಾರು ೮೦ ಅಡಿಗಳ ಮೇಲಿಂದ ಜೂಳು ಜೂಳು ನಿನಾದದೊಂದಿಗೆ ಪ್ರವಾಸಿಗರನ್ನು ಆರ್ಶಿಸುವ ಸುಂದರ ತಣವಾಗಿದೆ ಚೇಲವಾರ ಜಲಪಾತ.

ಅಪಾಯ ಕಟ್ಟಿಟ್ಟ ಬುತ್ತಿ:

ಚೇಲವಾರ ಜಲಪಾತ ರಮಣೀಯ ಜಲಪಾತ ಆಗಿದ್ದರು ಇದುವರೆಗೆ ಸುಮಾರು ೨೦ ಮಂದಿಯನ್ನು ಬಲಿ ಪಡೆದ ಜಲಪಾತವಾಗಿದೆ. ಇಲ್ಲಿ ಬರುವ ಪ್ರವಾಸಿಗರು ಸೌಂರ್ಯಕ್ಕೆ ಮಾರು ಹೋಗಿ ಮೊಬೈಲ್‌ನಿಂದ ಸೆಲ್ಫೀ ತೆಗೆಯಲು ಹೋಗಿ ಹಾಗೂ ಬೇಸಿಗೆಯಲ್ಲಿ ಸ್ನಾನಕ್ಕೆ (ಈಜಲು) ನೀರಿಗೆ ಇಳಿದು ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರೆ ಮತ್ತಿ ಕೆಲವರು ಜಲಪಾತದ ಕಲ್ಲು ಬಂಡೆಯ ಮೇಲೆ ಹೋಗಿ ಜಾರಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಈ ಜಲಪಾತದ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಈ ವಿಭಾಗ ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ಹಾಗೂ ಸರ್ವಜನಿಕರು ಮತ್ತು ಪ್ರವಾಸಿಗರು ಜಿಲ್ಲಾಡಳಿದ, ಪ್ರವಾಸೋದ್ಯಮ ಇಲಾಖೆ ಮತ್ತು ಜನಪ್ರತಿನಿಧಿಗಳ ಗಮನ ಸೇಳೆದರು ಯಾವುದೆ ಕ್ರಮ ಕೈಗೊಳ್ಳದೆ ಇರುವುದರಿಂದ ಇಲ್ಲಿ ಅಪಾಯ ಸಂಭವಿಸುತ್ತಲೇ ಇದೆ.

.........

ಚೇಲಾವರ ಜಲಪಾತ ಆಕರ್ಷಕವಾಗಿದೆ. ಇಲ್ಲಿ ಪ್ರವಾಸಿಗರಿಗೆ ಜಲಧಾರೆಯ ಸುಂದರ ನೋಟ, ಹಸಿರು ಪ್ರಕೃತಿ ಲಭ್ಯ. ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆಯ ಫಲಕ ಅಳವಡಿಸಲಾಗಿದೆ. ಆದರೆ, ಅಳವಡಿಸಿರುವ ಬೇಲಿ ಶಿಥಿಲವಾಗಿದ್ದು, ಪ್ರವಾಸಿಗರೂ ಇದರ ಅಡಿಯಲ್ಲಿ ತೂರಿ ನೀರಿನತ್ತ ಹೋಗುತ್ತಿದ್ದಾರೆ. ಸ್ಥಳೀಯ ಆಡಳಿತದವರ ಇತ್ತ ಗಮನ ಹರಿಸಿ, ಸೂಕ್ತ ಭದ್ರತೆ ಕಲ್ಪಿಸಿ ಹೆಚ್ಚಿನ ಅಪಾಯ ತಪ್ಪಿಸಬೇಕಾಗಿದೆ.

-ಕೃಷ್ಣಮೂರ್ತಿ ಕೆ., ಪ್ರವಾಸಿಗರು. 28.ಎನ್.ಪಿ.ಕೆ.1. ಚೆಯ್ಯಂಡಾಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ರುದ್ರ ರಮಣೀಯ ಚೇಲವಾರ ಜಲಪಾತ.

Share this article