ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ನಡೆದ ಶಿಕ್ಷಣ ಮಂಡಳಿ ಮೊದಲನೇ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿ ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿರುವುದರಿಂದ ಆಗುತ್ತಿರುವ ವೇತನ ಹೊರೆಯ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಪ್ರಸ್ತಾಪಿಸಿದ ವಿಷಯ ಕುರಿತು ವ್ಯಾಪಕ ಚರ್ಚೆ ನಡೆಯಿತು.
ಶೀಘ್ರವೇ ಕ್ರಮ:ಈ ಸಂಬಂಧ ಶೀಘ್ರದಲ್ಲೇ ಸಮಿತಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಮೈಸೂರು ವಿವಿಗೆ ಬರೆದಿದ್ದ ಪತ್ರದ ಆಧಾರದ ಮೇಲೆ ಈ ಕ್ರಮಕೈಗೊಂಡಿದೆ. ಮೈಸೂರು ವಿವಿಯ ವಿವಿಧ ವಿಭಾಗ, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ ಅಧ್ಯಾಪಕೇತರ ಉದ್ಯೋಗಿಗಳನ್ನು ಸೇವೆಯಲ್ಲಿ ಮುಂದುವರಿಸುವ ಹಾಗೂ ಸಿಬ್ಬಂದಿ ಸಂಖ್ಯೆಯನ್ನು ತರ್ಕಬದ್ಧಗೊಳಿಸಲು ಪರಾಮರ್ಶಿಸಿ ವರದಿ ಪಡೆಯಲು ನಿರ್ಧರಿಸಿ ಸಮಿತಿ ರಚಿಸಿ ವರದಿ ಕೊಡುವಂತೆ ಹೇಳಿದೆ.
ಮಂಜೇಗೌಡ ಅಸಮಾಧಾನ:
ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ವಿವಿಯಲ್ಲಿ 1,340 ಬೋಧಕೇತರ ಸಿಬ್ಬಂದಿ ಇದ್ದಾರೆ. 400 ಮಂದಿ ಹುದ್ದೆಗಳು ಸೃಜನೆಯಾಗಿವೆ. ಆದರೆ, ಕಾಲಕಾಲಕ್ಕೆ ಹೊರಗುತ್ತಿಗೆ, ತಾತ್ಕಾಲಿಕ ಆಧಾರದ ಮೇಲೆ ವಿವಿಧ ಹಂತದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಸಿಬ್ಬಂದಿ ಕಡಿತಗೊಳಿಸುವಂತೆ ನಿರ್ದೇಶನ ನೀಡಿದ್ದರಿಂದ ತರ್ಕ ಬದ್ಧಗೊಳಿಸಲು ಸಮಿತಿ ರಚಿಸಲಾಗಿದೆ ಎಂದು ಅವರು ವಿವರಿಸಿದರು. ಸಿಬ್ಬಂದಿ ತರ್ಕಬದ್ಧಗೊಳಿಸುವ ಸಂಬಂಧ ಸಮಿತಿ ವರದಿಯ ಬಳಿಕ ಸರ್ಕಾರದ ಗಮನಕ್ಕೂ ತರಲಾಗುವುದು ಎಂದರು.ವಿವಿಯಲ್ಲಿ ಕೆಲಸ ಮಾಡುವ ಬೋಧಕೇತರ ಸಿಬ್ಬಂದಿ ವೇತನವನ್ನು ಎಚ್ಆರ್‌ಎಂಎಸ್ ಅಡಿಗೆ ತರಲು ಸರ್ಕಾರದ ಗಮನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಸದನದಲ್ಲಿ ಪ್ರಸ್ತಾಪಿಸುವಂತೆ ಸದಸ್ಯ ಸಿ.ಎನ್. ಮಂಜೇಗೌಡರಲ್ಲಿ ಪ್ರೊ.ಡಿ. ಆನಂದ್ ಮನವಿ ಮಾಡಿದರು.
-- ಬಾಕ್ಸ್--
ಕಲಾ ನಿಕಾಯದ ಡೀನ್ ಮಾತನಾಡಿ, ಪಿಂಚಣಿ ಖಾತೆಯಿಂದ ಹಣವನ್ನು ತೆಗೆದುಕೊಳ್ಳುವುದು ಸರಿಯಲ್ಲ. ಇದು ಕಾನೂನುಬಾಹಿರವಾಗಲಿದೆ ಎಂದರೆ, ಪ್ರೊ.ಡಿ.ಆನಂದ್, 1,852 ನೌಕರರಿಗೆ ಪಿಂಚಣಿ ಪಾವತಿಬೇಕು. ಮುಂದೆ ಅದರ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ, ನೌಕರರ ವೇತನ ಮತ್ತು ಪಿಂಚಣಿಯನ್ನು ಎಚ್ಆರ್ಎಂಎಸ್ ಅಡಿಗೆ ತರುವಂತೆ ಸರ್ಕಾರದ ಗಮನಕ್ಕೆ ತರಬೇಕು. ಪಿಂಚಣಿ ಹಣ ಬಳಕೆಯ ಬಗ್ಗೆ ಅನೇಕರಿಗೆ ಗುಮಾನಿ ಬಂದು ಪ್ರಶ್ನೆ ಮಾಡುತ್ತಾರೆ. ಶೈಕ್ಷಣಿಕ ಕೆಲಸಗಳಿಗೆ ಒತ್ತು ನೀಡಬೇಕಾದರೆ ಗುಮಾನಿ ವಾತಾವರಣ ಇರಬಾರದು ಎಂದು ಹೇಳಿದರು.