ಗ್ರಾಮಸ್ಥರ ಒತ್ತಾಯ । ಪ್ರಸಾದಿ ಹಳ್ಳಿ ಗ್ರಾಮದಲ್ಲಿ ಚರಂಡಿ ಕಾಮಗಾರಿಗೆಂದು ಗುಂಡಿ । ತಿಂಗಳಾದರೂ ಪೂರ್ಣಗೊಳ್ಳದ ಕಾರ್ಯ । ಜನರ ಪರದಾಟ
ಕನ್ನಡಪ್ರಭ ವಾರ್ತೆ ಬೇಲೂರುಪ್ರಸಾದಿ ಹಳ್ಳಿ ಗ್ರಾಮದಲ್ಲಿ ಚರಂಡಿ ಕಾಮಗಾರಿಗೆ ಎಂದು ಕಳೆದ ಒಂದೂವರೆ ತಿಂಗಳ ಹಿಂದೆ ಜೆಸಿಬಿ ಯಂತ್ರದಿಂದ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು ಮಳೆಯಿಂದಾಗಿ ಕೆಸರು ತುಂಬಿ ಓಡಾಡಲು ಪರದಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಗಮನ ಹರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಪ್ರಸಾದಿಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ಈ ಹಿಂದಿನ ಶಾಸಕ ಕೆ.ಎಸ್.ಲಿಂಗೇಶ್‌ರವರ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಚರಂಡಿ ಕಾಮಗಾರಿಗೆ ಗುತ್ತಿಗೆದಾರರು ಮುಂದಾಗಿದ್ದರು. ಕಾಮಗಾರಿಗಾಗಿ ಮನೆಗಳ ಮುಂದೆಯೇ ಜೆಸಿಬಿ ಯಂತ್ರದಿಂದ ಮೊಣಕಾಲುದ್ದದ ಚರಂಡಿ ತೆಗೆದಿದ್ದು, ಕೆಲವೆಡೆ ಅರ್ಧಂಬರ್ಧ ಕಾಮಗಾರಿ ಮಾಡಿ ಹಾಗೆಯೇ ಬಿಟ್ಟಿರುವುದರಿಂದ ಒಂದೂವರೆ ತಿಂಗಳಿಂದ ಕಾಮಗಾರಿ ಮಾಡದೆ ನೆನೆಗುದಿಗೆ ಬಿದ್ದಿದೆ. ಇದರಿಂದ ಚರಂಡಿ ಮುಂದಿನ ಮನೆಯ ಗ್ರಾಮಸ್ಥರು ತಮ್ಮ ವಾಹನಗಳನ್ನು ಹೊರಗೆ ತೆಗೆಯಲಾಗದೆ, ಇತ್ತ ಸರಿಯಾಗಿ ಓಡಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ.ಅಲ್ಲದೆ ಇನ್ನೂ ಕೆಲವೆಡೆ ಮನೆ ಬಾಗಿಲಿಗೆ ಹೊಂದಿಕೊಂಡಂತೆಯೂ ಗುಂಡಿ ತೆಗೆದಿರುವುದರಿಂದ ಮನೆಯವರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಜತೆಗೆ ಅಲ್ಪಸ್ವಲ್ಪ ಚರಂಡಿ ಕಾಮಗಾರಿ ಮಾಡಿ ಹಾಗೆಯೇ ಬಿಟ್ಟಿರುವುದರಿಂದ ಕಬ್ಬಿಣದ ರಾಡುಗಳು ಬಾಯ್ದೆರೆದು ನಿಂತಿವೆ. ಮಕ್ಕಳು, ವೃದ್ಧರು ಏನಾದರೂ ಕಾಲು ಜಾರಿ ಬಿದ್ದರೆ ದೇವರೇ ಗತಿ ಎಂಬಂತಾಗಿದೆ. ಈಗ ಬರುತ್ತಿರುವ ಮಳೆ ನೀರಿನಿಂದ ಚರಂಡಿಯಲ್ಲಿ ತೆಗೆದ ಮಣ್ಣೆಲ್ಲ ನೀರಿನಲ್ಲಿ ನೆನೆದು ಕೊಚ್ಚೆಯಂತಾಗಿದ್ದು, ಜನರು ಮತ್ತು ಜಾನುವಾರು ಕೆಸರು ಗದ್ದೆಯಲ್ಲೇ ಓಡಾಡುವಂತಾಗಿದೆ.
ಮನೆಗಳಲ್ಲಿರುವ ವೃದ್ಧರಂತೂ ಬೆಳಿಗ್ಗೆ ಅಥವಾ ರಾತ್ರಿ ಸಮಯದಲ್ಲೂ ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯಾವುದೇ ಅವಘಡ ಸಂಭವಿಸುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇತ್ತ ಗಮನ ಹರಿಸಿ ಜನರಿಗಾಗುತ್ತಿರುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಚರಂಡಿ ಕಾಮಗಾರಿ ಮುಗಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆಂಬುದು ಪ್ರಸಾದಿಹಳ್ಳಿ ಗ್ರಾಮಸ್ಥರ ಆಗ್ರಹವಾಗಿದೆ.ಸ್ಥಳೀಯ ನಿವಾಸಿ ಗೌರಮ್ಮ ಮಾತನಾಡಿ, ‘ನಮ್ಮ ಮನೆ ಮುಂದೆಯೇ ಚರಂಡಿ ತೆಗೆದು ಒಂದೂವರೆ ತಿಂಗಳಾಗಿದೆ. ನಮ್ಮ ಮನೆ ಮುಂದಿನ ಚರಂಡಿ ಕೆಲಸ ಮಾಡದ ಕಾರಣ ಮತ್ತು ಅಗಲ ಮತ್ತು ಉದ್ದದ ಚರಂಡಿಯಲ್ಲಿ ಕೆಸರು ತುಂಬಿದ್ದು, ಇಲ್ಲಿ ದನ ಕರುಗಳು, ಜನರು ಓಡಾಡಲು ಹಾಗೂ ಚರಂಡಿ ದಾಟಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರು ಇಷ್ಟ ಬಂದ ಹಾಗೆ ಕೆಲಸ ಮಾಡಿಸುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮಂಜೇಗೌಡ ಮಾತನಾಡಿ, ‘ಗ್ರಾಮದಲ್ಲಿ ನಮ್ಮ ಮನೆಗಳ ಮುಂದೆ ಚರಂಡಿ ತೆಗೆದಿರುವುದರಿಂದ ವಯಸ್ಸಾದ ನಮಗೆ ಹತ್ತಿ ಇಳಿಯಲು ಸಾಧ್ಯವಾಗುತ್ತಿಲ್ಲ. ಮತ್ತು ಬೈಕ್‌ಗಳನ್ನು ಮನೆ ಹತ್ತಿರಕ್ಕೆ ತರುವುದಕ್ಕೂ ಸಾಧ್ಯವಾಗುತ್ತಿಲ್ಲ. ಈಗ ಮಳೆಯಿಂದ ಚರಂಡಿ ಕೆಸರಿನಿಂದ ತುಂಬಿದ್ದು, ಜಾರಿ ಬಿದ್ದಿದ್ದೇವೆ. ಆದಷ್ಟು ಬೇಗ ಕೆಲಸ ಮಾಡಿಸದಿದ್ದರೆ ಗ್ರಾಮಸ್ಥರು ಸೇರಿ ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.