ಶಶಿಧರ ಎಂ.ಪಾಟೀಲ
ನಾಲಾ ನೀರು ಬರುತ್ತೆ, ಇರುವ ಭೂಮಿಯಲ್ಲಿ ನೀರಾವರಿ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕೆಂಬ ಆಸೆ ಹೊತ್ತು ಕುಳಿತ ರೈತರಿಗೆ ಸುಮಾರು 2 ದಶಕಗಳೇ ಕಳೆದರೂ ನಾಲೆನೂ ನಿರ್ಮಾಣವಾಗಲಿಲ್ಲ, ನೀರೂ ಬರಲೇ ಇಲ್ಲ. ಆದರೆ, ನೀರು ಹರಿದು ಬರುವುದೆಂದು ಚಾತಕಪಕ್ಷಿಯಂತೆ ಕಾಯುತ್ತಿರುವುದು ಮಾತ್ರ ಇಂದಿಗೂ ಮುಂದುವರೆದಿದೆ.
ತಾಲೂಕಿನ ಹಿರೇಬೂದನೂರ, ಓಬಲದಿನ್ನಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ನಾಲಾ ಕಾಲುವೆಗಾಗಿ ಸುಮಾರು 20 ಅಡಿಯಷ್ಟು ಜಮೀನು ಬಿಟ್ಟುಕೊಟ್ಟ ರೈತರಿಗೆ ತುಂಬಲಾರದಷ್ಟು ಹಾನಿ ಆಗಿದ್ದು, ರೈತರ ಗೋಳು ಕೇಳುವವರಿಲ್ಲದಂತಾಗಿದೆ. ಹಿರೇಬೂದನೂರ, ಓಬಲದಿನ್ನಿ, ಯರಗಟ್ಟಿ, ಯರಝರ್ವಿ ಮುಂತಾದ ಗ್ರಾಮಗಳ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಿ ನೀರಾವರಿ ಪರಿಹಾರ ಒದಗಿಸಬೇಕು ಮತ್ತು ಜಮೀನುಗಳಿಗೆ ನೀರು ಒದಗಿಸಬೇಕೆಂಬ ಬೇಡಿಕೆಯ ಕಿಚ್ಚು ಪ್ರಗತಿಪರ ರೈತರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ.2007ರಲ್ಲಿಯೇ ಕಾಮಗಾರಿಗೆ ಚಾಲನೆ:ಬಳ್ಳಾರಿ ನಾಲಾ ಕಾಲುವೆ ಕಾಮಗಾರಿಗೆ 2007ರಂದು ಚಾಲನೆ ನೀಡಲಾಗಿದ್ದು, ಅಂದು ನಾಲಾ ತೋಡಲು ರೈತರ ಜಮೀನುಗಳಿಗೆ ಇನ್ನೇನೂ ಈ ಯೋಜನೆಯಿಂದ ನಮ್ಮ ಹೊಲಗಳು ನೀರಾವರಿ ಹೊಂದಿ ಉತ್ತಮ ಇಳುವರಿ ತೆಗೆಯಬಹುದೆಂಬ ಕನಸು ಕಂಡಿದ್ದ ಕನಸು ನೂಚ್ಚು ನೂರಾಗಿದೆ. ಕಾಲುವೆ ಪ್ರಾರಂಭವಾಗಿ 20 ವರ್ಷ ಗತಿಸಿದರೂ ನಾಲೆಗೆ ನೀರು ಮಾತ್ರ ಬರದಿರುವುದು ರೈತರಲ್ಲಿ ಆತಂಕದ ಛಾಯೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಕಾಲುವೆಗಳ ಕಡೆ ಗಮನಹರಿಸಲು ಒಕ್ಕೊರಲಿನ ಒತ್ತಾಯ:
ಬಳ್ಳಾರಿ ಕಾಲುವೆ ನೀರು ಸುಮಾರು 19 ಗ್ರಾಮದ ರೈತರಿಗೆ ತಲುಪುವಂತೆ ಸರ್ವೇ ಕಾರ್ಯ ಮಾಡಿದ್ದು, ಇದರ ಬಗ್ಗೆ ಈ ಭಾಗದ ರೈತರೆಲ್ಲರೂ ಹಿಡಕಲ್ ಡ್ಯಾಂ ನೀರಿನ ನೀರಾವರಿ ಇಲಾಖೆ ಅಧಿಕಾರಿ ಸಂಪರ್ಕಿಸಿದಾಗ ತಿಂಗಳ ನಂತರ ಬಂದು ಕಾಮಗಾರಿ ಪರಿಶೀಲಿಸಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದೆಂಬ ಭರವಸೆ ನೀಡಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಲ್ಲದೇ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆಂಬ ಗಂಭೀರ ಆರೋಪಗಳು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನೀರಾವರಿ ಸೌಲಭ್ಯ ಒದಗಿಸಿದರೇ ಆಗುವ ಲಾಭ ತಾಲೂಕಿನ ಕಟ್ಟಕಡೆ ಗ್ರಾಮಗಳಿಗೆ ಯಾವುದೇ ಇನ್ನಿತರ ನೀರಾವರಿ ಕೊಳವೆಬಾವಿ, ಬಾವಿ ಸೇರಿದಂತೆ ಇತರ ನೀರಿನ ವ್ಯವಸ್ಥೆ ಇರುವುದಿಲ್ಲ. ಈ ಸೌಲಭ್ಯ ಒದಗಿಸಿದರೇ ಫಲವತ್ತತೆ ಹೊಂದಿರುವ ಸುಮಾರು 106 ಕಿ.ಮೀ ಜಮೀನಿನಲ್ಲಿ ರೈತರು ಉತ್ತಮವಾದ ಇಳುವರಿ ಹೊಂದಿ ರೈತರು ತಮ್ಮ ಸುಖಕರ ಜೀವನ ಸಾಗಿಸಬಹುದು. ನೀರಾವರಿ ವ್ಯವಸ್ಥೆ ಇಲ್ಲದೇ ಇದ್ದ ಹೊಲ ಕಾಲುವೆಗಾಗಿ ನಾಶ ಹೊಂದಿ ಮಳೆ ಅವಲಂಬಿಸಿ ಸ್ವಲ್ಪ ಜಮೀನದಲ್ಲಿ ರೈತನು ತನ್ನ ಜೀವನ ಸಾಗಿಸುವುದು ಕಷ್ಟಕರವಾಗಿ ಜಮೀನನ ಕಡೆ ಕಣ್ಣು ಹಾಯಿಸದೇ ಮಹಾರಾಷ್ಟ್ರ, ಗೋವಾ ಮುಂತಾದ ಕಡೆ ಗೂಳೆ ಹೊತ್ತು ಹೋಗುವ ಪರಿಸ್ಥಿತಿ ಬಂದೊದಗಿದೆ.
2007 ರಿಂದ ಕಾಲುವೆ ಬಗ್ಗೆ ಜಲ ಸಂಪನ್ಮೂಲ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕಾಲುವೆ ಬಗ್ಗೆ ಕೇಳಿದರೇ ಮುಂದಿನ ದಿನಗಳಲ್ಲಿ ಕಾಲುವೇ ಕಾಮಗಾರಿ ನಿರ್ಮಿಸಿ ಕೊಡುತ್ತವೆಂದು ಭರವಸೆ ನೀಡಿದ್ದರು. ಆದರೆ, ಈಗ 20 ವರ್ಷ ಕಳೆದರೂ ಯೋಜನೆ ಪೂರ್ಣಗೊಳಿಸಿಲ್ಲ. ಅನ್ನದಾತ ಪರಿಹಾರ ಸಿಗದೆ ರೈತನಿಗೆ ಅನ್ಯಾಯವಾಗಿದೆ. ಎಚ್ಚೆತ್ತಕೊಂಡು ಹಣ ಬಿಡುಗಡೆ ಮಾಡಬೇಕು. ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದರೇ ಇಲಾಖೆಗಳ ಕಚೇರಿ ಮುಂದೆ ಧರಣಿ ಮಾಡಲಾಗುವುದು.
-ಲಕ್ಕಪ್ಪ ಕರೆಪ್ಪ ಶಿನೂಬಿ,
ರೈತ.