ಕುಂದಾಪುರ: ಕೋರ್ಟಿನಲ್ಲಿ ನಡೆಯುವ ನ್ಯಾಯದಾನದ ಲಾಭ ಸಮುದಾಯಗಳ ತಳ ಹಂತಕ್ಕೂ, ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಬೇಕು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕ ನ್ಯಾಯಮೂರ್ತಿ ವಿಭು ಬಖ್ರು ಹೇಳಿದ್ದಾರೆ.ಇಲ್ಲಿನ ಕೆರಾಡಿ ಗ್ರಾಮದ ವರಸಿದ್ಧಿ ವಿನಾಯಕ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ‘ಗ್ರಾಮೀಣ ಸಮುದಾಯದವರ ಸಬಲೀಕರಣ : ಹಕ್ಕುಗಳು ಮತ್ತು ಯೋಜನೆಗಳ’ ಕುರಿತು ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರತಿ ಪ್ರಜೆಗೂ ಸಂವಿಧಾನ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅವುಗಳನ್ನು ಪಡೆಯುವ ಕಾನೂನುಗಳ ಬಗ್ಗೆ ಮಾಹಿತಿ ಪ್ರತಿಯೊಬ್ಬರೂ ಹೊಂದಿರಬೇಕು ಮತ್ತು ಅಗತ್ಯಕ್ಕನುಗುಣವಾಗಿ ಈ ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದವರು ಹೇಳಿದರು.ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷೆ ನ್ಯಾಯಮೂರ್ತಿ ಅನು ಸಿವರಾಮನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯ ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಬೇಕು. ಕಾನೂನಿನ ಬಗ್ಗೆ ಯಾವುದೇ ಅಗತ್ಯ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆ 15100 ಅನ್ನು ಸಂಪರ್ಕಿಸಬಹುದಾಗಿದೆ ಎಂದರು.ಸುಮಾರು 26 ಕ್ಕೂ ಹೆಚ್ಚು ವಿವಿಧ ಇಲಾಖೆಗಳು ತಮ್ಮ ಯೋಜನೆಗಳ ಮಾಹಿತಿಯ ಮಳಿಗೆಗಳನ್ನು ತೆರೆದಿದ್ದರು. ಇದೇ ಸಂದರ್ಭ ಮೂವರು ಫಲಾನುಭವಿಗಳಿಗೆ ಸಂಕೇತಿಕವಾಗಿ ಹಕ್ಕುಪತ್ರಗಳನ್ನು ಹಸ್ತಾಂತರಿಸಲಾಯಿತು.ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ. ಎಸ್ ಭರತ್ ಕುಮಾರ್, ಕೆರಾಡಿ ಗ್ರಾ.ಪಂ. ಅಧ್ಯಕ್ಷ ಸುದರ್ಶನ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕಾಲೇಜಿನ ಕೆರಾಡಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಇದ್ದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಿರಣ್ ಎಸ್ ಗಂಗಣ್ಣವರ್ ಸ್ವಾಗತಿಸಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ. ವೈ ವಂದಿಸಿದರು.