ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತ್ಯುತ್ಸವದ ಅಂಗವಾಗಿ ಸರ್ವಧರ್ಮದಿಂದ 22 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು.
ಗದಗ: ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಪಂ. ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯುತ್ಸವ ಆಚರಿಸಲಾಯಿತು. ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆಯಿಂದ ನಡೆದವು. ಎಲ್ಲೆಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಆಚರಿಸಲಾಯಿತು.
ಬೆಳಗ್ಗೆಯಿಂದ ಪುಣ್ಯಾಶ್ರಮದಲ್ಲಿರುವ ಹಾನಗಲ್ಲ ಕುಮಾರಸ್ವಾಮಿ ಗದ್ದುಗೆ, ಪಂ. ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಹೀಗಾಗಿ ಜಿಲ್ಲೆಯ ನಾನಾ ಭಾಗದಿಂದ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಮೂವರು ಶ್ರೀಗಳ ದರ್ಶನ ಪಡೆದರು.
ಸುಮಂಗಲೆಯರಿಂದ ಪೂರ್ಣಕುಂಭ: ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳ 112ನೇ ಜಯಂತ್ಯುತ್ಸವ ಅಂಗವಾಗಿ 112 ಪೂರ್ಣಕುಂಭದೊಂದಿಗೆ ಪಂ. ಪುಟ್ಟರಾಜಕವಿ ಗವಾಯಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.ವೀರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಬೃಹತ್ ಕುಂಭ ಮೆರವಣಿಗೆ ಭೂಮರೆಡ್ಡಿ ಸರ್ಕಲ್, ಕೆ.ಎಚ್. ಪಾಟೀಲ್ ಸರ್ಕಲ್, ಹತ್ತಿಕಾಳ ಕೂಟ, ಟಾಂಗಾಕೂಟ್, ಗಾಂಧಿ ಸರ್ಕಲ್, ಕೆ.ಸಿ. ರಾಣಿ ರಸ್ತೆ ಮಾರ್ಗವಾಗಿ ಪುನಃ ಪುಣ್ಯಾಶ್ರಮ ತಲುಪಿತು. ಸಾವಿರಾರು ಮಹಿಳೆಯರು ಹಾಗೂ ವಿದ್ಯಾರ್ಥಿಗಳು ನಗರದ ಪ್ರಮುಖ ಮಾರ್ಗಗಳಲ್ಲಿ ವಾದ್ಯಮೇಳ, ಪೂರ್ಣಕುಂಭದೊಂದಿಗೆ ಗವಾಯಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಸಾವಿರಾರು ಸುಮಂಗಲೆಯರು ಪೂರ್ಣಕುಂಭ ಕಳಶ ಹೊತ್ತು ಪಾಲ್ಗೊಂಡು, ಮೆರುಗು ನೀಡಿದರು.
ಎಲ್ಲೆಲ್ಲೂ ಪುಟ್ಟರಾಜರ ಸ್ಮರಣೆ: ನಗರದ ಭೂಮ್ಮರಡ್ಡಿ ಸರ್ಕಲ್‌ನಲ್ಲಿರುವ ಪುಟ್ಟರಾಜರ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ನಗರದ ಮಾರ್ಗಗಳಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಅವರನ್ನು ಸ್ಮರಿಸುವ ಜತೆಗೆ ಎಲ್ಲೆಡೆಯೂ ಅನ್ನಪ್ರಸಾದ ಹಮ್ಮಿಕೊಳ್ಳಲಾಗಿತ್ತು. ದಾರಿಹೋಕರಿಗೆ ಪ್ರಸಾದದೊಂದಿಗೆ ತಂಪು ಪಾನೀಯ ವಿತರಿಸಲಾಯಿತು.
ವಿಶೇಷ ಪೂಜೆ: ಡಾ. ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಅಂಗಸಂಸ್ಥೆಗಳ ಸಹಯೋಗದಲ್ಲಿ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತ್ಯುತ್ಸವದ ಅಂಗವಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿರುವ ಮೂವರು ಶ್ರೀಗಳ ಗದ್ದುಗೆಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಬೆಳಗ್ಗೆಯಿಂದಲೂ ನೂರಾರು ಭಕ್ತರು ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಗಳ ದರ್ಶನಾಶೀರ್ವಾದ ಪಡೆದರು. ಜತೆಗೆ ಹಲವಾರು ಅಂಧ ಅನಾಥ ಮಕ್ಕಳು ಸಹ ಜಯಂತ್ಯುತ್ಸವ ಅಂಗವಾಗಿ ಮಠಕ್ಕೆ ಆಗಮಿಸಿದ್ದರು.22 ಜೋಡಿ ಸಾಮೂಹಿಕ ವಿವಾಹ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತ್ಯುತ್ಸವದ ಅಂಗವಾಗಿ ಸರ್ವಧರ್ಮದಿಂದ 22 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ವೀರೇಶ್ವರ ಪುಣ್ಯಾಶ್ರಮದ ಪೀಠಾಪತಿ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು.ಭಕ್ತರಿಗೆ ಅನ್ನಪ್ರಸಾದ: ನಾಡಿನ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರಿಗೆ ಹಾಗೂ 22 ಜೋಡಿ ಮದುವೆಗೆ ಬಂದಿರುವ ಭಕ್ತರಿಗೆ ಎಪಿಎಂಸಿ ಆವಣರದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಬುಂದಿ ಅನ್ನ ಸಾಂಬರ್ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ಭಕ್ತರು ಭಾಗವಹಿಸಿದ್ದರು. ಸರದಿ ಸಾಲಿನಲ್ಲಿ ಬಂದು ಪ್ರಸಾದ ಸ್ವೀಕರಿಸಿದರು.ಟ್ರಾಫಿಕ್ ಜಾಮ್: ನಗರದ ಹೃದಯ ಭಾಗದಲ್ಲಿರುವ ವೀರೇಶ್ವರ ಪುಣ್ಯಾಶ್ರಮ ಆವರಣ ಹಾಗೂ ಎಪಿಎಂಸಿ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಬಂದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೈಕ್, ಕಾರ್, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಿಂದ ಸಂಜೆಯವರೆಗೆ ಟ್ರಾಫಿಕ್ ಕಿರಿಕಿರಿ ಉಂಟಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.