ಬಿಜೆಪಿಗೆ ಏಕತ್ವದ ನಡುವೆ ಬಹುತ್ವ ಬಿತ್ತುವ ಛಾತಿ ಇದೆ: ಎಸ್‌ಜಿಸಿ

KannadaprabhaNewsNetwork |  
Published : Oct 26, 2026, 01:15 AM IST
 | Kannada Prabha

ಸಾರಾಂಶ

ಸಮಾಜಮುಖಿತ್ವಕ್ಕೆ ಕಿಂಚಿತ್ತೂ ಲೋಪವಾಗದಂತೆ ಬದುಕಿರುವ ಜೆಪಿ (ಬಂಜಗೆರೆ ಜಯಪ್ರಕಾಶ್)ಯದ್ದು ನಿಶ್ಚಿತಮತಿಯ ಚಿಂತನೆ. ಎಂದಿಗೂ ಆತುರದ ಆಲೋಚನೆ ಮಾಡಿದವರಲ್ಲ. ಏಕತ್ವ ಎನ್ನುವವರ ನಡುವೆ ಎದೆಗುಂದದೆ ಬಹುತ್ವ ಬಿತ್ತುವ ಛಾತಿ ಅವರದ್ದಾಗಿದೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಸಮಾಜಮುಖಿತ್ವಕ್ಕೆ ಕಿಂಚಿತ್ತೂ ಲೋಪವಾಗದಂತೆ ಬದುಕಿರುವ ಜೆಪಿ (ಬಂಜಗೆರೆ ಜಯಪ್ರಕಾಶ್)ಯದ್ದು ನಿಶ್ಚಿತಮತಿಯ ಚಿಂತನೆ. ಎಂದಿಗೂ ಆತುರದ ಆಲೋಚನೆ ಮಾಡಿದವರಲ್ಲ. ಏಕತ್ವ ಎನ್ನುವವರ ನಡುವೆ ಎದೆಗುಂದದೆ ಬಹುತ್ವ ಬಿತ್ತುವ ಛಾತಿ ಅವರದ್ದಾಗಿದೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ‘ನಮ್ಮವರು ಬಳಗ’ ಭಾನುವಾರ ಹಮ್ಮಿಕೊಂಡಿದ್ದ ‘ಜನಮುಖಿ ಜೆ.ಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತ ಡಾ.ಬಂಜಗೆರೆ ಜಯಪ್ರಕಾಶ್ ಅವರ ಬದುಕು-ಬರಹ‌- ಹೋರಾಟದ ಅವಲೋಕನ, ಸನ್ಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದುಕು ಮತ್ತು ಬರಹ ಒಂದೇ ಆಗಿರುವವರ ಸಾಲಿನಲ್ಲಿ ಜೆ.ಪಿ ಪ್ರಮುಖರು. ಮೆರೆಯಬೇಕು ಎಂಬುವವರ ಮಧ್ಯೆ ಬೆಸೆಯುವ ಅವರ ಮಾತೃಗುಣದ ಬದುಕು ಮತ್ತು ವ್ಯಕ್ತಿತ್ವ ತತ್ವನಿಷ್ಠವಾದುದು. ಅವರ ಸಂವೇದನಾಶೀಲ ಕೃತಿಗಳಿಗೆ ಸಾರ್ವಕಾಲಿಕತೆಯ ಲಕ್ಷಣಗಳಿವೆ ಎಂದರು.

ಜೆನ್‌ಜಿಗೆ ಬೇಕಿದೆ ನೈತಿಕ ಶಕ್ತಿ:

ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿದ್ದಾರೆ ಎಂದು ಭರವಸೆ ಕಳೆದುಕೊಂಡಿದ್ದವರಿಗೆ ಜೆನ್‌ಜಿ ಹೋರಾಟವು ಹೊಸ ಚೈತನ್ಯ ನೀಡಿದೆ. ಸಂವಿಧಾನ ಮಾರ್ಗದಲ್ಲಿ ಅಹಿಂಸಾತ್ಮಕ ಹೋರಾಟ ನಡೆಸುತ್ತಾ ಭವಿಷ್ಯದ ಬಗ್ಗೆ ಹೊಸ ಭರವಸೆ ಹುಟ್ಟಿಸಿರುವ ಈ ಜೆನ್‌ಜಿ ಹೋರಾಟಕ್ಕೆ ನೈತಿಕ ಶಕ್ತಿಯ ಅಗತ್ಯವಿದೆ. ತಾವೇ ಮೆರೆಯಬೇಕು ಎಂಬುವರ ಮಧ್ಯೆ ಬೆಳೆಸುವ ಗುಣವಿರುವ ಜೆ.ಪಿ ಜೆನ್‌ಜಿ ಹೋರಾಟದ ಗರ್ಭದಲ್ಲಿದ್ದಾರೆ. ನಾವು ಯಾರನ್ನು ಒಳಗೊಳ್ಳುತ್ತೇವೆ ಮತ್ತು ಯಾರನ್ನು ಬೆಳೆಸುತ್ತೇವೆ ಎಂಬುದು ಅತಿ ಮುಖ್ಯ. 70ರ ದಶಕದಲ್ಲಿ ಜಯಪ್ರಕಾಶ ನಾರಾಯಣ್ ಅವರು ನಡೆಸಿದ ಸಂಪೂರ್ಣ ಕ್ರಾಂತಿಯ ಹೋರಾಟದ ದೂರಗಾಮಿ ಪರಿಣಾಮಗಳ ಅರಿವಿನ ಕೊರತೆ ಇದ್ದಿದ್ದರ ಪರಿಣಾಮದಿಂದಾಗಿ ದೇಶ ಇಂದು ಈ ಸ್ಥಿತಿಗೆ ತಲುಪಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಜೆ.ಪಿ ಸಾಹಿತ್ಯ–ಸಂಸ್ಕೃತಿ ಕುರಿತು ಮಾತನಾಡಿದ ಲೇಖಕ ರವಿಕುಮಾರ್ ಬಾಗಿ, ಕನ್ನಡ ಸಾಹಿತ್ಯ ಲೋಕವು ಇದುವರೆಗೆ ಜೆ.ಪಿ ಅವರನ್ನು ಕವಿ, ಲೇಖಕ ಹಾಗೂ ಅನುವಾದಕರಾಗಿ ಮಾತ್ರ ನೋಡಿದೆ. ಆದರೆ, ಸಂಸ್ಕೃತಿ ಚಿಂತಕರಾಗಿ ನೋಡಿಲ್ಲ. ಅವರೊಬ್ಬ ದೊಡ್ಡ ಸಂಸ್ಕೃತಿ ಚಿಂತಕ. ಅವರ ಒಟ್ಟಾರೆ ಲಹರಿ ಇರುವುದೇ ಸಂಸ್ಕೃತಿ ಕುರಿತ ಬರಹಗಳಲ್ಲಿ ಎಂದರು.

ಜೆ.ಪಿ ಕಾವ್ಯ ಕುರಿತು ಮಾತನಾಡಿದ ಸಾಹಿತಿ ಎಚ್.ಎಲ್. ಪುಷ್ಪಾರವರು, ಬಂಜಗೆರೆ ಜಯಪ್ರಕಾಶ್ ಅವರ ಕಾವ್ಯವು ಕ್ರಾಂತಿ ಮತ್ತು ಕಾವ್ಯದ ಸಂಬಂಧವನ್ನು ಕಟ್ಟಿ ಕೊಡುತ್ತವೆ. ಅವರ ಎರಡೂ ಕವನ ಸಂಕಲನಗಳಲ್ಲಿ ಕಾವ್ಯಕ್ಕೆ ಹೋರಾಟದ ಚೌಕಟ್ಟು ಒದಗಿಸಿದ್ದಾರೆ. ಹೋರಾಟವನ್ನೇ ಬದುಕಾಗಿಸಿಕೊಂಡಿರುವ ಜೆ.ಪಿ ಅವರ ಕಾವ್ಯದಲ್ಲೂ ಇದು ಎದ್ದು ಕಾಣುತ್ತದೆ. ಸ್ವಂತಕ್ಕಾಗಿ ಏನನ್ನೂ ಬಯಸದ ಜೆ.ಪಿ ಬೇರೆಯವರ ಸಂಕಟ ಮತ್ತು ನೋವುಗಳಿಗೆ ಮಿಡಿದು ಖುಷಿಪಟ್ಟಿದ್ದೇ ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಕವಿಗಳಾದ ಮೇದರದೊಡ್ಡಿ ಹನುಮಂತ ಮತ್ತು ಶೈಲಾ ಶ್ರೀನಿವಾಸ್ ಅವರು ಜೆ.ಪಿ ಅವರ ಕವಿತೆಗಳನ್ನು ವಾಚಿಸಿದರು. ಬ್ಯಾಡರಹಳ್ಳಿ ಶಿವಕುಮಾರ್ ಮತ್ತು ಚಂದ್ರು ಗಾಯನ ನಡೆಸಿಕೊಟ್ಟರು. ನಮ್ಮವರು ಬಳಗದ ಡಿ.ಆರ್. ದೇವರಾಜು, ಪದ್ಮರೇಖಾ, ಆರ್. ನಾಗರಾಜು, ಎಚ್.ಡಿ. ಉಮಾಶಂಕರ್, ಅಂಕನಹಳ್ಳಿ ಪಾರ್ಥ, ಕುಂಬಾಪುರ ಬಾಬು, ಎಸ್.ಕೃಷ್ಣ ಉಪಸ್ಥಿತರಿದ್ದರು.

ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಬಂಜಗೆರೆ ಜಯಪ್ರಕಾಶ್ ಅವರ ಸಾಹಿತ್ಯ ಮತ್ತು ಹೋರಾಟದ ಬದುಕಿನಲ್ಲಿ ಸಮ ಸಮಾಜ ನಿರ್ಮಾಣದ ಆಶಯ ಎದ್ದು ಕಾಣುತ್ತದೆ.

-ಕೆ.ಶೇಷಾದ್ರಿ ಶಶಿ, ಅಧ್ಯಕ್ಷ, ನಗರಸಭೆ

ಚಳವಳಿಗಳ ನಿರಂತರ ಸಂಗಾತಿ ಜೆ.ಪಿ. ಸಾಮಾಜಿಕ ನ್ಯಾಯದ ಭಾಗವಾಗಿಯೇ ಎಲ್ಲಾ ಹೋರಾಟಗಳನ್ನು ಮಾಡಿದ್ದಾರೆ. ಅವರ ಸಾಹಿತ್ಯ, ಸಂಸ್ಕೃತಿಹಾಗೂ ಹೋರಾಟದ ಬದುಕಿನ ದಾಖಲೀಕರಣ ಆಗಬೇಕಿದೆ.

-ಡಾ.ಕರಿಯಪ್ಪ ಮಾಳಗಿ, ಚಿತ್ರದುರ್ಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಎನ್‌ಕೆ ಮಲ್ಟಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ
ಮನ್‌ ಕಿ ಬಾತ್‌ನಲ್ಲಿ ಕಲ್ಬುರ್ಗಿಯ ತೊಗರಿ ಘಮ