ಸಂಪುಟ ಸಭೆ ಯಾವುದೇ ಹೊಸ ಯೋಜನೆ ಪ್ರಕಟಿಸಿಲ್ಲ

KannadaprabhaNewsNetwork |  
Published : Jul 04, 2025, 11:46 PM IST
ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿದರು | Kannada Prabha

ಸಾರಾಂಶ

ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ನಡೆಯುತ್ತದೆ. ಅದರಲ್ಲಿ ನಮ್ಮ ಜಿಲ್ಲೆಗಳಿಗೆ ಬಂಪರ್ ಕೊಡುಗೆ ದೊರೆಯುತ್ತದೆ ಎಂದು ಈ ಭಾಗದ ಜನತೆ ಬಹಳ ನಿರೀಕ್ಷೆ ಹೊಂದಿದ್ದರು. ಆದರೆ ಸಚಿವ ಸಂಪುಟದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನದ್ವನಿಯನ್ನ ಕಡೆಗಾಣಿಸಿದ್ದಾರೆ. ಜನರ ನಿರೀಕ್ಷೆ ಹುಸಿಯಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಂದಿಗಿರಿಧಾಮದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳು ಬಿಟ್ಟರೆ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ. ಎಚ್‌ಎನ್ ವ್ಯಾಲಿಯ ನೀರಿನ ಮೂರನೇ ಹಂತದ ಶುದ್ಧೀಕರಣ ಹಾಗು ಎತ್ತಿನಹೊಳೆ ಹರಿಸಲು ನಿಖರವಾದ ಘೋಷಣೆ ಮಾಡಿಲ್ಲ. ಆದರೆ ಶಿಡ್ಲಘಟ್ಟ ಚಿಂತಾಮಣಿಗೆ ಎಚ್‌ಎನ್ ವ್ಯಾಲಿ ನೀರು ವಿಸ್ತರಣೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಕಾಮಗಾರಿಗೆ 15 ವರ್ಷಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಎತ್ತಿನಹೊಳೆ ನೀರು ಹರಿಸಲು ಇನ್ನೂ ಎರಡು ವರ್ಷ ಕಾಲಾವಕಾಶ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದನ್ನು ಕೇಳಿದರೆ ನೀರು ಬರುವ ಸಾಧ್ಯತೆ ಇಲ್ಲ ಎನಿಸುತ್ತದೆ ಎಂದರು.

ಕೈಗಾರಿಕೆ ಕೃಷಿ ಭೂಮಿ

ಇದಲ್ಲದೆ ಜಂಗಮಕೋಟೆ ಬಳಿ ನಿರ್ಮಿಸಲು ಹೊರಟಿದ್ದ ಕೈಗಾರಿಕಾ ವಲಯ ಸ್ಥಾಪಿಸಲು ಉದ್ದೇಶಿಸಿರುವ ಕೃಷಿ ಜಮೀನು ವಶಪಡಿಸಿಕೊಳ್ಳುವ ನಿರ್ಧಾರವನ್ನೂ ಕೈಬಿಡಬೇಕೆಂದು ಒತ್ತಾಯಿಸಿದ್ದರೂ ಸಹ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡದಿರುವುದನ್ನು ತಾವು ವಿರೋಧಿಸುವುದಾಗಿ ಹೇಳಿದರು. ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ನಡೆಯುತ್ತದೆ. ಅದರಲ್ಲಿ ನಮ್ಮ ಜಿಲ್ಲೆಗಳಿಗೆ ಬಂಪರ್ ಕೊಡುಗೆ ದೊರೆಯುತ್ತದೆ ಎಂದು ಈ ಭಾಗದ ಜನತೆ ಬಹಳ ನಿರೀಕ್ಷೆ ಹೊಂದಿದ್ದರು. ಆದರೆ ಸಚಿವ ಸಂಪುಟದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನದ್ವನಿಯನ್ನ ಕಡೆಗಾಣಿಸಿದ್ದಾರೆ. ಬಯಲುಸೀಮೆಗಳ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದರು.

ಕಾಮಗಾರಿಗೆ ಗಡುವು ನೀಡಿಲ್ಲ

ಬಜೆಟ್‌ನಲ್ಲಿ ತೆಗೆದುಕೊಂಡಿದ್ದ ತೀರ್ಮಾನಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಿದ್ದು ಕೆಲಸ ಮುಗಿಸಲು ಯಾವುದೇ ಗಡುವು ನೀಡಿಲ್ಲ. ಇದರಿಂದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಕೆಲಸಗಳನ್ನು ಮುಗಿಸಲು ಗಡುವು ನೀಡಬೇಕಿತ್ತು. ಇನ್ನೂ ಹೆಚ್ ಎನ್ ವ್ಯಾಲಿ ನೀರನ್ನು ಶಿಡ್ಲಘಟ್ಟ ಹಾಗೂ ಚಿಂತಾಮಣಿ ಹಳ್ಳಿಗಳಿಗೆ ವಿಸ್ತರಿಸಿದ್ದು ಸ್ವಾಗತಾರ್ಹ ಆದ್ರೆ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಸಂಬಂಧಪಟ್ಟಂತೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಕನಿಷ್ಠ ಎಚ್ ಎನ್ ವ್ಯಾಲಿ ನೀರನ್ನು ಬೋರ್ವೆಲ್ ಗಳಿಗೆ ತಲುಪದಂತೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.

ವಿಶೇಷ ಅನುದಾನ ನೀಡಿಲ್ಲ

ಬಿಜೆಪಿ ಮುಖಂಡ ಹಾಗೂ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ಕ್ಯಾಬಿನೆಟ್ ಸಭೆಯಲ್ಲಿ ಬಾಗೇಪಲ್ಲಿ ಹೆಸರನ್ನ ಬದಲಾಯಿಸಿ ಭಾಗ್ಯನಗರ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ನಾಮಕರಣ ಮಾಡಿದರೆ ಸಾಲದು. ಆ ತಾಲೂಕು, ಜಿಲ್ಲೆಗಳಿಗೆ ವಿಷೇಶ ಅನುಧಾನವನ್ನ ನೀಡಬೇಕಿತ್ತು. ನಾವು ನಿರೀಕ್ಷಿಸಿದ ಹೈ ಟೆಕ್ ಹೂವಿನ ಮಾರುಕಟ್ಟೆಗೆ ಸ್ಥಾನ ಬದಲಾವಣೆ ಮಾಡಿಲ್ಲ. ಅಲ್ಲಿರುವ ಸಸ್ಯ ಸಂಕುಲವನ್ನ ಏನು ಮಾಡುತ್ತಾರೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ ಎಂದರು.

ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ‌.ನಾಗರಾಜ್ ಮಾತನಾಡಿ, ನಂದಿ ಕ್ರಾಸ್ ನಲ್ಲಿರುವ ಮೆಗಾ ಡೇರಿಯಲ್ಲಿ ಲೋಕಲ್ ಪ್ಯಾಕೇಜ್ ಘಟಕ ನಿರ್ಮಾಣಕ್ಕೆ ಐವತ್ತು ಕೋಟಿ ಅನುಧಾನ ನೀಡಬೇಕೆಂದು ಒತ್ತಾಯಿಸಿದ್ದರೂ ಅದರ ಬಗ್ಗೆ ಪ್ರಸ್ತಾಪವೇ ಇಲ್ಲ ಹಾಗು ಡೇರಿ ವಿಸ್ತರಣೆಗೆ ಜಮೀನು ಮುಂಜೂರು ಮಾಡುವ ಬಗ್ಗೆಯೂ ಚಕಾರವೇ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಸೀಕಲ್ ಆನಂದ್ ಗೌಡ, ಉದಯ್ ಕುಮಾರ್, ಮುರಳೀಧರ್, ಕೃಷ್ಣಮೂರ್ತಿ, ಮಧುಚಂದ್ರ, ಅಶೋಕ್, ಕಲಾನಾಗರಾಜ್, ಮತ್ತಿತರರು ಇದ್ದರು.

PREV