ಕನ್ನಡಪ್ರಭ ವಾರ್ತೆ ಉಡುಪಿ
ಆರೋಪಿಯನ್ನು ನ.28ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದ್ದರೂ, ಪೊಲೀಸರ ತನಿಖೆ, ಸ್ಥಳ ಮಹಜರು ಮುಗಿರುವುದರಿಂದ ಅವಧಿಗೆ ಮೊದಲೇ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ಡಿ.5ರವರೆಗೆ ನ್ಯಾಯಾಂಗ ಬಂದನಕ್ಕೆ ಆದೇಶಿಸಿತು.
ಸ್ಕೂಟರ್ - ಬಟ್ಟೆ ಪತ್ತೆ: ಆರಂಭದಲ್ಲಿ ಆರೋಪಿ ಚೌಗುಲೆ ತಪ್ಪು ಮಾಹಿತಿ ನೀಡಿ ಪೊಲೀಸರ ದಾರಿ ತಪ್ಪಿಸುತ್ತಿದ್ದ, ಇದೀಗ ಪೊಲೀಸರು ಆರೋಪಿಯಿಂದ ಕೊಲೆಯ ಪೂರ್ಣ ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿ ನ.12ರಂದು ನಾಲ್ಕು ಮಂದಿಯನ್ನು ಕೊಲೆದ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆಗೆ ರಕ್ತ ತಗಲಿದ್ದು, ಅದನ್ನು ಕಾರಿನಲ್ಲಿ ಮಂಗಳೂರಿಗೆ ಹಿಂದಕ್ಕೆ ತೆರಳುವಾಗ, ಮಧ್ಯೆ ಬಪ್ಪನಾಡಿನಲ್ಲಿ ತೆಗೆದು ರಸ್ತೆ ಪಕ್ಕದಲ್ಲಿ ಸುಟ್ಟು ಹಾಕಿದ್ದ. ಅಲ್ಲಿಗೆ ಆರೋಪಿಯನ್ನು ಕರೆದೊಯ್ದ ಪೊಲೀಸರು, ಸುಟ್ಟ ಬಟ್ಟೆಯ ಅವಶೇಷಗಳನ್ನು ಸಂಗ್ರಹಿಸಿದ್ದಾರೆ.
ಈಗಾಗಲೇ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಚೂರಿ, ಸಿಸಿ ಕ್ಯಾಮರಗಳಿಗೆ ಮುಖದ ಗುರುತು ಮರೆಮಾಚಲು ಹಾಕಿಕೊಂಡಿದ್ದ ಮಾಸ್ಕ್, ಮಂಗಳೂರಿಗೆ ತೆರಳುವುದಕ್ಕೆ ಬಳಸಿದ್ದ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.