ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ದೂರದ ದೂರದೂರಿನಿಂದ ಪಾದಯಾತ್ರೆ ಮೂಲಕ ಸೂರಗೊಂಡನಕೊಪ್ಪಕ್ಕೆ ಬಂದಿದ್ದ ಲಂಬಾಣಿ ಸಮುದಾಯದ ಸೇವಾಲಾಲ್ ಮಾಲಾದಾರಿಗಳು ಸಮಾಜಕ್ಕೆ ಆಗುತ್ತಿರುವ ನೋವು, ಅನ್ಯಾಯದ ಬಗ್ಗೆ ಉಫ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದೆ ತೋಡಿಕೊಂಡು, ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್ ಡಿಕೆ ಎಂಬ ಘೋಷಣೆ ಕೂಗಿದ್ದನ್ನೇ ಘೋರ ಅಪರಾಧವೆಂಬಂತೆ ಕೇಸ್ ಮಾಡಲಾಗಿದೆ ಎಂದರು.
ಉದ್ದೇಶ ಪೂರ್ವಕವಾಗಿಯೇ ಕಪ್ಪು ಬಟ್ಟೆ ಪ್ರದರ್ಶಿಸಲಾಗಿದೆ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ, ಒಂದು ಕೃತ್ಯ ಎಸಗಲು ಗುಂಪು ಸೇರಲಾಗಿದೆಯೆಂಬ ಅಂಶಗಳನ್ನು ಒಳಗೊಂಡ ಸೆಕ್ಷನ್‌ಗಳಡಿ ಎಫ್ಐಆರ್‌ನ್ನು ಲಂಬಾಣಿ ಸಮುದಾಯದ ಮೇಲೆ ದಾಖಲು ಮಾಡಲಾಗಿದೆ. ಇದು ರಾಜಕೀಯ ಪ್ರೇರಿತವಾಗಿ ದಾಖಲಿಸಿದ ಎಫ್ಐಆರ್ ಆಗಿದ್ದು, ತಕ್ಷಣವೇ ಮಾಲಾದಾರಿಗಳ ಮೇಲೆ ದಾಖಲಿಸಿರುವ ಎಫ್ಐಆರ್‌ನ್ನು ಪೊಲೀಸರು, ರಾಜ್ಯ ಸರ್ಕಾರ ರದ್ಧುಪಡಿಸಬೇಕು ಎಂದು ಒತ್ತಾಯಿಸಿದರು.ನಮ್ಮದೇ ಸಮುದಾಯ ಕಾರ್ಯಕ್ರಮ, ಶ್ರೀ ಸಂತ ಸೇವಾಲಾಲ್‌ರ ಜಯಂತಿಯಲ್ಲಿ ಸಮಾಜದ ಕಷ್ಟಗಳನ್ನು, ಸಮಸ್ಯೆಗಳನ್ನು ತಿಳಿಸಲು 5 ನಿಮಿಷ ಕಾಲ ಮಾಜಿ ಶಾಸಕ ಪಿ.ರಾಜೀವ್‌ರಿಗೆ ಮಾತನಾಡಲು ಅವಕಾಶ ಕೇಳಲಾಗಿತ್ತು. ಆದರೆ, ರಾಜೀವ್‌ರಿಗೆ ಮಾತನಾಡಲು ಅವಕಾಶ ಕಲ್ಪಿಸದಿದ್ದಾಗ ಲಂಬಾಣಿ ಸಮುದಾಯದ ಯುವಕರು ಬೇಸರಗೊಂಡು, ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದಾರೆ. ಇಷ್ಟಕ್ಕೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಸಮುದಾಯದ 25-30 ಜನರ ವಿರುದ್ಧ ಬಿಎನ್‌ಎಸ್ ಪ್ರಕಾರ ಕೇಸ್ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಅನ್ಯ ಸಮುದಾಯಗಳು ತಮ್ಮ ಸಮಾಜಕ್ಕೆ ಅನ್ಯಾಯವಾದಾಗ ಹಲ್ಲೆ ಮಾಡುವುದು, ಸಾರ್ವಜನಿಕರ ಆಸ್ತಿಗಳಿಗೆ ಹಾನಿ ಮಾಡುವುದನ್ನೆಲ್ಲಾ ಮಾಡುತ್ತಾರೆ. ಆದರೆ, ಲಂಬಾಣಿ ಸಮಾಜದ ಯುವಕರು ಇಂತಹ ಕೃತ್ಯಗಳನ್ನು ಎಸಗಿಲ್ಲ. ತಿಳಿವಳಿಕೆ ಕೊರತೆಯಿಂದಾಗಿ ಕೆಲ ಯುವಕರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಘೋಷಣೆ ಕೂಗಿ, ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದಾರೆ. ಹಾಗಾಗಿ ಸಮುದಾಯದ 25-30 ಜನರ ಮೇಲೆ ದಾಖಲಿಸಿದ ಎಫ್ಐಆರ್ ಕೈಬಿಡಬೇಕು ಎಂದು ವಕೀಲ ಜಿ.ಮಂಜುನಾಯ್ಕ ಒತ್ತಾಯಿಸಿದರು.