ಸಾಗರ: ಅಂಗನವಾಡಿ ನೌಕರರ ಕಾರ್ಯ ಶ್ಲಾಘನೀಯವಾದದ್ದು. ಅವರ ನಿಷ್ಕಲ್ಮಶ ಸೇವೆಗೆ ಸರ್ಕಾರದಿಂದ ತಕ್ಕ ಪ್ರತಿಫಲ ಸಿಗಬೇಕು ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ತಾಯಿ ಹೇಗೆ ಆರೈಕೆ ಮಾಡುತ್ತಾಳೋ, ಅಂಗನವಾಡಿಗಳಲ್ಲಿ ನೀವು ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದೀರಿ. ಸರ್ಕಾರ ನಿಮಗೆ ಅನೇಕ ಜವಾಬ್ದಾರಿಯನ್ನು ನೀಡಿದ್ದು ಅದನ್ನು ಸಹ ಸಮರ್ಥವಾಗಿ ನಿಭಾಯಿಸಿದ್ದೀರಿ. ನಿಮಗೆ ಕೊಡುತ್ತಿರುವ ಗೌರವಧನ ಕಡಿಮೆ ಎನ್ನುವುದು ಗೊತ್ತಿದೆ. ಈ ಬಗ್ಗೆ ಕ್ಷೇತ್ರದ ಶಾಸಕರು ನಿಮ್ಮ ಪರವಾಗಿ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ. ನಿಮ್ಮ ಸೇವಾನಿಷ್ಠೆ ಅನುಕರಣೀಯವಾದದ್ದು ಎಂದು ಹೇಳಿದರು.
ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್ ಬಿ.ಎಲ್., ಸಂಘದ ರಾಜ್ಯಾಧ್ಯಕ್ಷೆ ಬಿ. ಪ್ರೇಮಾ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜಪ್ಪ ಕೆ., ಮಕ್ಕಳ ಸಂರಕ್ಷಣಾಧಿಕಾರಿ ಶಾರದಾ ಬಂಗೇರ, ಶಕುಂತಲಾ, ತ್ರಿವೇಣಿ, ವಿದ್ಯಾ, ಅನುಸೂಯ ಇನ್ನಿತರರು ಹಾಜರಿದ್ದರು. ಸೇವೆಯಿಂದ ನಿವೃತ್ತರಾದ ಸಾವಿತ್ರಿ ಬೊಬ್ಬಿಗೆ ಮತ್ತು ರಿಹಾನ ಪರ್ವಿನ್ ಅವರನ್ನು ಸನ್ಮಾನಿಸಲಾಯಿತು. ಶೀಲಾ ಟಿ.ಎನ್. ಸ್ವಾಗತಿಸಿ, ಚೇತನ ವಂದಿಸಿ, ರೂಪ ನಿರೂಪಿಸಿದರು.