ತಾಳಿ ಬಿಚ್ಚಿಕೊಟ್ಟಿದ್ದ ಪ್ರಕರಣ, ವಿದ್ಯಾರ್ಥಿ ಶೈಕ್ಷಣಿಕ ಜವಾಬ್ದಾರಿ ಹೊತ್ತ ಸಚಿವ ತಂಗಡಗಿ

KannadaprabhaNewsNetwork |  
Published : Sep 16, 2025, 12:03 AM IST
15ಕೆಎನ್ಕೆ-1ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದ ರೇಣುಕಮ್ಮಳ ಮನೆಗೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿದರು.    | Kannada Prabha

ಸಾರಾಂಶ

ಕನ್ನಡಪ್ರಭ ವರದಿ ಆಧರಿಸಿ ಭಾನುವಾರ ವಿದ್ಯಾರ್ಥಿನಿ ಮನೆಗೆ ಆಗಮಿಸಿದ ಸಚಿವ ಶಿವರಾಜ ತಂಗಡಗಿ, ಗಂಗಾವತಿಯ ಸ್ಫೂರ್ತಿ ಕಾಲೇಜಿನಲ್ಲಿ ದಾಖಲಾತಿ ಪಡೆದು ಕೋರ್ಸ್‌ಗೆ ತಗಲುವ ವೆಚ್ಚವನ್ನು ನಾನೇ ಭರಿಸುತ್ತೇನೆ. ಕೂಡಲೇ ವಿದ್ಯಾರ್ಥಿನಿ ಕಾವೇರಿಯ ದಾಖಲಾತಿ ಮಾಡಿಕೊಳ್ಳುವಂತೆ ಕಾಲೇಜಿನ ಚೇರ್‌ಮನ್‌ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.

ಕನಕಗಿರಿ:

ಮಗಳ ವಿದ್ಯಾಭ್ಯಾಸಕ್ಕಾಗಿ ಪತಿ ಎದುರೆ ತಾಳಿ ಬಿಚ್ಚಿಕೊಟ್ಟಿದ್ದ ತಾಲೂಕಿನ ಮುಸಲಾಪುರದ ರೇಣುಕಮ್ಮ ವಾಲಿಕಾರ ನಿವಾಸಕ್ಕೆ ಸಚಿವ ಶಿವರಾಜ ತಂಗಡಗಿ ಭಾನುವಾರ ಭೇಟಿ ನೀಡಿ, ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಮುಂದಿನ ಓದಿಗೆ ಸಹಾಯ ಹಸ್ತ ಚಾಚಿದರು. ಈ ಕುರಿತು ವಿಶೇಷ ವರದಿ ಪ್ರಕಟಿಸಿ ಪ್ರಕರಣ ಬೆಳಕಿಗೆ ತಂದ ಕನ್ನಡಪ್ರಭಕ್ಕೆ ಧನ್ಯವಾದ ತಿಳಿಸಿದರು.

ಗಂಗಾವತಿ ನಗರದ ಬಿಬಿಸಿ ಕಾಲೇಜ್‌ ಆಫ್‌ ನರ್ಸಿಂಗ್‌ ಸಂಸ್ಥೆಯ ಚೇರ್‌ಮನ್‌ ಬಾಕಿ ಇರುವ ₹ 90000 ಪ್ರವೇಶ ಶುಲ್ಕ ಕಟ್ಟಿದರೆ ಮಾತ್ರ ನಿಮ್ಮ ಮಗಳ ಮೂಲ ದಾಖಲೆ ಸೇರಿದಂತೆ ಅಂಕಪಟ್ಟಿ ನೀಡುತ್ತೇನೆ ಎಂದು ಹೇಳಿದ್ದರು. ಈ ವೇಳೆ ಅವರಲ್ಲಿ ಹಣವಿರಲಿಲ್ಲ. ಆಗ ಚೇರಮನ್‌ ಕೊರಳಿನಲ್ಲಿರುವ ತಾಳಿ ಕೊಡಿ ಎಂದಾಗ ರೇಣುಕಮ್ಮ, ಮಕ್ಕಳ ವಿದ್ಯಾಭ್ಯಾಸಕ್ಕಿಂತ ದೊಡ್ಡದು ಯಾವುದೂ ಇಲ್ಲವೆಂದು ತಾಳಿ, ಕಿವಿಯೋಲೆ ಸೇರಿದಂತೆ ಒಂದೂವರೆ ತೊಲೆಗೂ ಹೆಚ್ಚಿನ ಬಂಗಾರವನ್ನು ಬಿಚ್ಚಿಕೊಟ್ಟು ಬಂದಿದ್ದರು. ಈ ಕುರಿತು ಕನ್ನಡಪ್ರಭ ಸಮಗ್ರ ವರದಿ ಪ್ರಕಟಿಸಿತ್ತು. ಈ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಕಾಲೇಜಿನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಮರುದಿನ ಚೇರ್‌ಮನ್‌ ಕಾಲೇಜಿಗೆ ವಿದ್ಯಾರ್ಥಿನಿ ಹಾಗೂ ತಾಯಿ ಕರೆಸಿ ಮರಳಿ ಬಂಗಾರದ ಆಭರಣ ನೀಡಿ ಕಳಿಸಿದ್ದರು. ಮೂಲ ದಾಖಲೆಗಳನ್ನು ಸಹ ಮರಳಿಸಿದ್ದರು.

ಕನ್ನಡಪ್ರಭ ವರದಿ ಆಧರಿಸಿ ಭಾನುವಾರ ವಿದ್ಯಾರ್ಥಿನಿ ಮನೆಗೆ ಆಗಮಿಸಿದ ಸಚಿವ, ಗಂಗಾವತಿಯ ಸ್ಫೂರ್ತಿ ಕಾಲೇಜಿನಲ್ಲಿ ದಾಖಲಾತಿ ಪಡೆದು ಕೋರ್ಸ್‌ಗೆ ತಗಲುವ ವೆಚ್ಚವನ್ನು ನಾನೇ ಭರಿಸುತ್ತೇನೆ. ಕೂಡಲೇ ವಿದ್ಯಾರ್ಥಿನಿ ಕಾವೇರಿಯ ದಾಖಲಾತಿ ಮಾಡಿಕೊಳ್ಳುವಂತೆ ಕಾಲೇಜಿನ ಚೇರ್‌ಮನ್‌ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.

ಈ ವೇಳೆ ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ತಾಲೂಕು ಕೆಡಿಪಿ ಸದಸ್ಯ ಶರಣಪ್ಪ ತೆಗ್ಗಿನಮನಿ, ಪ್ರಮುಖರಾದ ಬಸವಂತಗೌಡ ಪಾಟೀಲ್, ಬಸವರಾಜ ಕಟ್ಟಿಮನಿ, ಗುರುನಗೌಡ ಕಾಟಾಪೂರ, ಸಚಿವ ತಂಗಡಗಿ ಸಹಾಯಕ ವೆಂಕಟೇಶ ಗೋಡಿನಾಳ ಇದ್ದರು.

ಮಗಳ ವಿದ್ಯಾಭ್ಯಾಸಕ್ಕಾಗಿ ತಾಯಿ ಮಾಂಗಲ್ಯ ಸರ ಬಿಚ್ಚಿಸಿಕೊಂಡಿರುವುದು ಅಮಾನವೀಯ. ಇಂತಹ ಪ್ರಕರಣಗಳಿಂದ ಸಮಾಜ ತಲೆ ತಗ್ಗಿಸುವಂತಾಗಿದೆ. ಘಟನೆಯನ್ನು ಬೆಳಕಿಗೆ ತಂದ ಕನ್ನಡಪ್ರಭಕ್ಕೆ ಧನ್ಯವಾದ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ