ಕನ್ನಡಪ್ರಭ ವಾರ್ತೆ ರಾಯಚೂರು
ಜಾತಿಗಣತಿ ವರದಿ ಕುರಿತು ಏ.17 ಕ್ಕೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು, ಸಾಧಕ-ಬಾಧಕಗಳ ಅವಲೋಕನೆ ನಂತರ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.ನಗರದಲ್ಲಿ ಭಾನುವಾರ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾತಿಗಣತಿ ಮಾಡಲು ನಿರ್ಧರಿಸಿ, ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿ 200 ಕೋಟಿ ರು.ವೆಚ್ಚದಲ್ಲಿ ಜಾತಿಗಣತಿ ಮಾಡಲಾಗಿದೆ. ಈ ನಡುವೆ ಕಾಂತರಾಜ್ ವರದಿ, ಜಯಪ್ರಕಾಶ ಹೆಗಡೆ ಅವರ ವರದಿ ನೆನೆಗುದಿಗೆ ಬಿದ್ದಿದ್ದವು. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ವರದಿಯನ್ನು ತರಿಸಿ ಸೀಲ್ ಒಪನ್ ಮಾಡಿ ಮಾಹಿತಿ ಮಾತ್ರ ಕೊಟ್ಟಿದ್ದಾರೆ. ಎಲ್ಲರಿಗೂ ವರದಿ ಪ್ರತಿಯನ್ನು ನೀಡಿ ಸಮಗ್ರವಾಗಿ ಅಧ್ಯಯನ ಮಾಡಿಕೊಂಡು ಬನ್ನಿ ಚರ್ಚೆ ಮಾಡೋಣ ಎಂದು ತಿಳಿಸಿದ್ದಾರೆ ಎಂದರು.ಜಾತಿಗಣತಿಯಿಂದ ಯಾರಿಗೂ ತೊಂದರೆ ಆಗಬಾರದು, ವರದಿ ಆಧಾರದ ಮೇಲೆ ಅರ್ಹರಿಗೆ ಅನುಕೂಲವಾಗಬೇಕು, ಯಾರೂ ಆತಂಕ ಪಡುವ ಅಗತ್ಯವಿಲ್ಲ, ಊಹಾಪೋಹಗಳಿಂದ ಆತಂಕ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಜನಸಂಖ್ಯೆ ಆಧಾರದಮೇಲೆ ಸೌಲಭ್ಯ ಸಿಗಬೇಕು ಎನ್ನುವ ಉದ್ದೇಶದಿಂದಲೆಯೇ ಗಣತಿಯನ್ನು ಮಾಡಿಸಿದ್ದು, ಲಕ್ಷಾಂತರ ಅಧಿಕಾರಿ,ಸಿಬ್ಬಂದಿ ಕೆಲಸ ಮಾಡಿದ್ದಾರೆ. ರಾಜ್ಯದ 1 ಕೋಟಿ 35 ಲಕ್ಷ ಕುಟುಂಬಗಳನ್ನ ಸಂಪರ್ಕಿಸಲಾಗಿದೆ, 5 ಕೋಟಿ 85 ಲಕ್ಷ ಜನ ಜಾತಿಗಣತಿಯಲ್ಲಿ ಭಾಗವಹಿಸಿದ್ದಾರೆ, 6 ಕೊಟಿ 11 ಲಕ್ಷ ಜನಸಂಖ್ಯೆ ಇತ್ತು, ಮನೆ ಒಬ್ಬರ ಸಹಿ ತೆಗೆದುಕೊಂಡು ಗಣತಿ ಮಾಡಲಾಗಿದೆ ಎಂದು ವಿವರಿಸಿದರು.ಜಾತಿಗಣತಿ ಮಾಡಿ 10 ವರ್ಷವಾಯ್ತು ಹೊಸಗಣತಿ ಮಾಡಬೇಕು ಅನ್ನೋ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್‌ಡಿ ಕುಮಾರಸ್ವಾಮಿ ಅವರು ಜವಾಬ್ದಾರಿಯುತರಾಗಿ ಮಾತನಾಡಬೇಕು. 2011ರ ಜಾತಿಗಣತಿ ಇಟ್ಟುಕೊಟ್ಟು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಅದೇ ಆಧಾರದ ಮೇಲೆಯೇ ನಮಗೆಲ್ಲಾ ಹಣ ಕೊಡುತ್ತಿದೆ. ಆದರೆ ಕೆಲವರು ರಾಜಕೀಯವಾಗಿ ವಿರೋಧ ಮಾಡಬೇಕು ಎನ್ನುವ ದುರುದ್ದೇಶ ಅವರದ್ದಾಗಿದೆ. ಸರ್ಕಾರ ಏನೇ ಮಾಡಲಿ ಒಳ್ಳೆಯದಿರಲಿ ಕೆಟ್ಟದಿರಲಿ ಅದಕ್ಕೆ ವ್ಯತಿರಿಕ್ತ ಮಾತನಾಡಬೇಕು ಅನ್ನೋ ಮನಸ್ಥಿತಿ ಕುಮಾರಸ್ವಾಮಿ ಅವರದ್ದಾಗಿದ್ದು, ಯಾವ ರೀತಿ ಸಲಹೆ ಮಾರ್ಗದರ್ಶನ ನೀಡಬೇಕು ಎನ್ನುವುದು ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲ ಎಂದು ಕುಟುಕಿದರು.