ಕೊಪ್ಪಳ: ದುಷ್ಟಗುಣ ಸಂಹರಿಸಿ ಸದ್ಗುಣ ಧರಿಸುವುದೇ ನವರಾತ್ರಿಯ ಉದ್ದೇಶ, ಸರ್ವ ಶಕ್ತಿವಂತ ಪರಮಾತ್ಮ ಶಿವನಿಂದ ಶಕ್ತಿ ಪಡೆದು ಅಸುರಿ ಗುಣ ನಾಶ ಮಾಡುವವರೇ ಶಿವಶಕ್ತಿಯರು ದೇವಿಯರು ಎಂದು ಕೊಪ್ಪಳ ಈಶ್ವರಿಯ ವಿಶ್ವ ವಿದ್ಯಾಲಯ ಸೇವಾ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಹೇಳಿದ್ದಾರೆ.
ನವರಾತ್ರಿಯ ಆಧ್ಯಾತ್ಮಿಕ ರಹಸ್ಯ ತಿಳಿಸಿದ ಅವರು, ಕಾಮ,ಕ್ರೋಧ,ಲೋಭ, ಮೋಹ, ಅಹಂಕಾರ, ದುರಾಭಿಮಾನ, ದ್ವೇಷ, ಈರ್ಷೆ, ಮದ, ಮತ್ಸರ ಎಂಬ ಹತ್ತು ತಲೆಯ ರಾವಣನ ಮೇಲೆ ವಿಜಯ ಸಾಧಿಸುವುದೇ ವಿಜಯದಶಮಿ ಎಂದರು.
ನಾವೆಲ್ಲರೂ ಜೀವನದಲ್ಲಿ ವಿಜಯ ಸಾಧಿಸಲು ಹಾಗೂ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತರಾಗಲು ತಮ್ಮನ್ನ ಆತ್ಮ ಎಂದು ತಿಳಿದು ಪರಮಾತ್ಮನನ್ನು ನೆನಪು ಮಾಡಿ. ಅವನೇ ಈಶ್ವರ, ಅಲ್ಲಾ, ಗಾಡ್, ಅರಿಹಂತ, ಜೆಹೊವಾ, ದಿವ್ಯಜೋತಿ ಪರಮಾತ್ಮನ ನೆನಪಿನಿಂದಲೇ ಸುಖ, ಶಾಂತಿ, ಆರೋಗ್ಯ, ಸರ್ವಪ್ರಾಪ್ತಿ ಎಂದರು.ಈಶ್ವರಿಯ ವಿಶ್ವವಿದ್ಯಾಲಯದ ದೈವೀ ಪರಿವಾರದವರಿಂದ ದಶಕಂಠ ರಾವಣನ ಸಂಹಾರ ಚೈತನ್ಯ ದೇವಿಯರ ದರ್ಶನ ರೂಪಕ ಹಾಗೂ ವಿಶ್ವಪಿತನಿಗೆ ರಾಷ್ಟ್ರಗೀತೆ ರೂಪಕ ಹಾಗೂ ಜ್ಞಾನ ನೃತ್ಯ ಸರ್ವರ ಮನ ಹರ್ಷಿತಗೊಳಿಸಿತು. ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಅರುಣ್ ಶೆಟ್ಟಿ, ದುರ್ಗಾ ಮಿತ್ರ ಮಂಡಳಿಯ ಅಂಬರೀಶ್, ಸಂಗಯ್ಯ ಮುಂತಾದವರಿದ್ದರು. ಬಿಕೆ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು.