ಗೇರುಮಾಳದಲ್ಲಿ ನಡೆದ ಜಡೇರುದ್ರಸ್ವಾಮಿ ಜಾತ್ರೆ

KannadaprabhaNewsNetwork | Published : Nov 18, 2024 12:03 AM

ಸಾರಾಂಶ

ತಮಿಳುನಾಡಿನ ಗಡಿ ಗ್ರಾಮವಾದ ಗೇರುಮಾಳದಲ್ಲಿ ಕಾರ್ತಿಕ‌ ಮಾಸದ‌ ನಿಮಿತ್ತ ಜಡೆರುದ್ರಸಾಮಿ, ಕುಂಬೇಶ್ವರಸ್ವಾಮಿ ಹಾಗೂ ನಡಕೆರೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ರಥೋತ್ಸವ ಮಳೆಯ ನಡುವೆಯೂ ಅದ್ಧೂರಿಯಾಗಿ ಜರುಗಿತು.

ಮಳೆಯ ನಡುವೆಯೇ ರಥೋತ್ಸವ । ಸಹಸ್ರಾರು ಭಕ್ತರು ಆಗಮನ

ಹನೂರು: ತಮಿಳುನಾಡಿನ ಗಡಿ ಗ್ರಾಮವಾದ ಗೇರುಮಾಳದಲ್ಲಿ ಕಾರ್ತಿಕ‌ ಮಾಸದ‌ ನಿಮಿತ್ತ ಜಡೆರುದ್ರಸಾಮಿ, ಕುಂಬೇಶ್ವರಸ್ವಾಮಿ ಹಾಗೂ ನಡಕೆರೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ರಥೋತ್ಸವ ಮಳೆಯ ನಡುವೆಯೂ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಸಂಭ್ರಮ, ಸಡಗರದೊಂದಿಗೆ ನಡೆಯಿತು.

ತಮಿಳುನಾಡಿಗೆ ಸೇರಿದ ಗೇರುಮಾಳ ಗ್ರಾಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೇ ವಾಸಿಸುತ್ತಿದ್ದಾರೆ. ವರ್ಷಕ್ಕೆ ಒಂದು ಬಾರಿ ಕಾರ್ತಿಕ ಮಾಸದಲ್ಲಿ‌ ನಡೆಯುವ ಈ ಜಾತ್ರೆಗೆ ಗೇರುಮಾಳ‌ ಸೇರಿ ಸುತ್ತಲಿನ ಹತ್ತಾರು ಗ್ರಾಮದವರು ಹಾಗೂ ಹನೂರು ತಾಲೂಕಿನ ಒಡೆಯರಪಾಳ್ಯ ಹುತ್ತೂರು ಬೈಲೂರು, ಉದ್ದಟ್ಟಿ, ಲೋಕನಹಳ್ಳಿ ಗ್ರಾಮ ಸೇರಿ ಒಡೆಯರಪಾಳ್ಯದ ಟಿಬೆಟ್ ಸಮುದಾಯದ ಜನತೆ ಸೇರಿ ರಾಜ್ಯದ ನಾನಾ ಗ್ರಾಮಗಳಿಂದ ಆಗಮಿಸಿದ್ದ ಜನತೆ ಒಂದೆಡೆ ಜಮಾವಣೆಗೊಂಡರು. ತಮಿಳುನಾಡಿನ‌ ಜನತೆ ಜೊತೆ ಈ ಜಾತ್ರೆಯನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿಯ ವಿಶೇಷವಾಗಿದೆ.

ರಥ ಚಲಿಸುತ್ತಿದ್ದಂತೆ ಭಕ್ತರು ಹಣ್ಣು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ದವಸ, ಧಾನ್ಯಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಣೆ ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆದರು ರಥೋತ್ಸವದ ಸಂದರ್ಭದಲ್ಲಿ ನಂದಿದ್ವಜ, ವೀರಗಾಸೆ, ಹುಲಿವಾಹನ ಹಾಗೂ ಬಸವ ವಾಹನಗಳ ಜಾನಪದ ನೃತ್ಯ ಸೇರಿದಂತೆ ಕಲಾ ತಂಡಗಳು ಈ ರಥೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು. ತಾಲೂಕಿನ ಹಾಗೂ ತಮಿಳುನಾಡು ಸೇರಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ನೆರೆದಿದ್ದರು.

ಗಮನ ಸೆಳೆದ ರಂಗಕುಣಿತ:

ಯುವಕರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ರಥೋತ್ಸವ ವೇಳೆಯಲ್ಲಿ ಕುಣಿದು ಸಂಭ್ರಮಿಸಿದರೆ, ಮಹಿಳೆಯರು ಬಾಯಿಗೆ ಬೀಗ ಹಾಕಿಕೊಂಡು ಇಷ್ಟಾರ್ಥ ಸಿದ್ಧಿಸುವಂತೆ ನಾನಾ ಸೇವೆಗಳಲ್ಲಿ ತೊಡಗಿಸಿಕೊಂಡು ಹರಕೆ ತೀರಿಸಿದರು.

Share this article