ಬಂಗಾರಪೇಟೆ: ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅಡಿಗಲ್ಲುಗಳಾಗಿದ್ದು, ಅವರ ಹಕ್ಕುಗಳು, ಸಮಾನತೆ ಮತ್ತು ಸಾಧನೆಗಳನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಿ.ಮುನಿರೆಡ್ಡಿ ಹೇಳಿದರು.

ಪಟ್ಟಣದ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಚಿಗುರು ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 115ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಕುಟುಂಬ ಹಾಗೂ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಅವರ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವೈದ್ಯಕೀಯ, ಆಡಳಿತ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಚಿಗುರು ಟ್ರಸ್ಟ್ ಅಧ್ಯಕ್ಷೆ ಎಸ್. ಪ್ರಭಾವತಿ ಮಾತನಾಡಿ, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು. ಮಹಿಳೆಯರ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಸಮಾಜದ ಹೊಣೆಗಾರಿಕೆ ಆಗಿದೆ. ಚಿಗುರು ಟ್ರಸ್ಟ್ ಮಹಿಳೆಯರ ಅಭಿವೃದ್ಧಿಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರಕ್ಷಕ ನಿರೀಕ್ಷಕ ಸಿ.ರವಿಕುಮಾರ್, ಭಾರತ್ ಫೌಂಡೇಷನ್ ಸಯ್ಯದ್ ನದೀಮ್ ಶಾ, ಮಕ್ಕಳ ತಜ್ಞ ಡಾ.ಅರುಣ್ ಕುಮಾರ್, ಹಾಗೂ ಡಾ.ಮಹೇಶ್, ತೊರಲಕ್ಕಿ ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್.ರವಿ, ಮುಖ್ಯ ಶಿಕ್ಷಕಿ ವಿ.ಭಾಗ್ಯಲಕ್ಷ್ಮಮ್ಮ, ಡಾ.ಮಾಲತಿ, ಶಿಕ್ಷಕಿ ನಾರಾಯಣಮ್ಮ, ಬೈರಕೂರು ಬೌದ್ಧ ಉಪಾಸಕ ಎಂ.ರವಿ, ಸೌಭಾಗ್ಯ, ರಾಧ, ಶಿಕ್ಷಕಿ ಕೆ.ಆರ್.ತ್ರೇಜೋವತಮ್ಮ, ಚಿಗುರು ಸಂಸ್ಥೆ ಸಂಯೋಜಕಿ ಏಂಜಲ್.ಪಿ ಇದ್ದರು.