ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಕೇಂದ್ರ ಸರ್ಕಾರ ಎಲ್ಲದರ ಮೇಲೆ ಟ್ಯಾಕ್ಸ್ ಹಾಕಿ ಜನರ ಹೊಟ್ಟೆ ಮೇಲೆ ಹೊಡೆದು ಬಿಜೆಪಿ ಸರ್ಕಾರ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುಂಡ್ಲುಪೇಟೆ ಹಾಗೂ ಬೇಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ಧ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಹಾಲಿಗೆ ನಾಲ್ಕು ದರ ಏರಿಕೆ ಮಾಡಿ ನೇರವಾಗಿ ರೈತರಿಗೆ ನಮ್ಮ ಸರ್ಕಾರ ನೀಡುತ್ತಿದೆ. ಇದಕ್ಕೆ ಬಿಜೆಪಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.ಯುಪಿಎ ಸರ್ಕಾರದ ಅವಧಿಯಲ್ಲಿ 40 ರಿಂದ 50 ಡಿಸೇಲ್, ಪೆಟ್ರೋಲ್ 50 ರಿಂದ 60 ರು. ಇತ್ತು ಬಿಜೆಪಿಯ ಕೇಂದ್ರ ಸರ್ಕಾರ ಬಂದ ಮೇಲೆ ಡಿಸೇಲ್, ಪೆಟ್ರೋಲ್ ಬೆಲೆ ಎಷ್ಟಿದೆ ಎಂಬುದು ಬಿಜೆಪಿಗರಿಗೆ ಗೊತ್ತಿಲ್ಲವೇ? ಹಾಲಿನ ದರ ಏರಿಕೆ ಮಾಡಲಾಗಿದೆ ಅದು ರೈತರಿಗೆ ತಲುಪುತ್ತದೆ ಸರ್ಕಾರಕ್ಕಲ್ಲ ಎಂದರು.
ಸಹಾಯ ತಪ್ಪಾ?ರಾಜ್ಯ ಸರ್ಕಾರ 60 ಸಾವಿರ ಕೋಟಿ ಬಡವರ ಗ್ಯಾರಂಟಿ ಯೋಜನೆಗಳಿಗೆ ನೀಡುತ್ತದೆ ಬಡವರಿಗೆ ಸಹಾಯ ಮಾಡೋದು ತಪ್ಪಾ? ಬಡವರ ಕಷ್ಟಕ್ಕೆ ಬಂದರೆ ರಾಜ್ಯ ಸರ್ಕಾರ ಖಾಲಿಯಾಗಿದೆ ಎಂದು ಬಿಜೆಪಿಗರು ಬೊಬ್ಬೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಗುಂಡ್ಲುಪೇಟೆ ನನ್ನ ಕ್ಷೇತ್ರದಂತೆಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಂದೆ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ನನಗೆ ಆಪ್ತ ಸ್ನೆಹಿತ. ಗುಂಡ್ಲುಪೇಟೆಗೆ ಬಂದರೆ ನನ್ನ ಕ್ಷೇತ್ರಕ್ಕೆ ಬಂದ ಭಾವನೆ ಬರುತ್ತದೆ. ಶಾಸಕ ಯುವಕ ಸಣ್ಣ ಪುಟ್ಟ ತಪ್ಪುಗಳಾದರೆ ತಿದ್ದಿ ತೀಡುವ ಕೆಲಸ ಕಾರ್ಯಕರ್ತರು ಮಾಡಬೇಕು. ಸಣ್ಣ ವಿಚಾರವನ್ನೆ ದೊಡ್ಡದು ಮಾಡಬೇಡಿ ಎಂದರು.
ಮುಂದೆ ಜಿಪಂ, ತಾಪಂ, ಪುರಸಭೆ ಚುನಾವಣೆಗಳು ಬರುತ್ತವೆ. ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು. ಅಲ್ಲದೆ ಹೆಚ್ಚಿನ ಅಭ್ಯರ್ಥಿ ಗೆಲ್ಲಿಸಿ ಅಧಿಕಾರ ಹಿಡಿಯಲು ಶ್ರಮಿಸಿ ಎಂದರು.ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಮನವಿ ಮಾಡಿದ್ದಾರೆ. ನನ್ನ ಸಹಕಾರ ಜಿಲ್ಲೆ ಹಾಗೂ ಗುಂಡ್ಲುಪೇಟೆಗೆ ಇದೆ. ಶಾಸಕರು ಹಾಗೂ ಕಾರ್ಯಕರ್ತರಿಗೂ ನಾನು ಸಹಕಾರ ನೀಡುತ್ತೇನೆ ಎಂಬ ಭರವಸೆಯ ಮಾತನಾಡಿದರು.
ಅಧಿಕಾರ ಕಳೆದುಕೊಂಡು ಬಿಜೆಪಿಗರಿಗೆ ಇರಲು ಆಗುತ್ತಿಲ್ಲ. ಮುಖ್ಯಮಂತ್ರಿಗಳ ಮೇಲೆ ಮುಡಾ ಹಗರಣ ಎತ್ತಿಕೊಂಡು ಹೋರಾಟ ಮಾಡಿ ಸಿಎಂ ಮುಖಕ್ಕೆ ಮಸಿ ಬಳಿಯಲು ಹೊರಟಿದ್ದಾರೆ. ಬಿಜೆಪಿಗರ ಆರೋಪ, ಟೀಕೆಗೆ ರಾಜ್ಯದ ಜನರು ತಲೆ ಕೆಡಿಸಿಕೊಳ್ಳಬೇಡಿ ಎಂದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆದ ಕಾಡ ಅಧ್ಯಕ್ಷ ಪಿ. ಮರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರೇ ನಮಗೆ ಸರ್ಕಾರ ಹಾಗಾಗಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಿಗಾಗಿ ಒಂದು ಗಂಟೆ ಬಿಡುವು ಮಾಡಿಕೊಂಡು ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದರು.ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಎಂ.ಮುನಿರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಲತಾ ರಾಜಶೇಖರ್(ಜತ್ತಿ), ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಪುರಸಭೆ ಅಧ್ಯಕ್ಷ ಮಧು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಉಮಾಪತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಲತಾ ಜತ್ತಿ, ಹಾಪ್ ಕಾಮ್ಸ್ ಅಧ್ಯಕ್ಷ ಎಂ.ನಾಗೇಶ್, ಕಾಂಗ್ರೆಸ್ ಮುಖಂಡ ಬಿ.ಕುಮಾರಸ್ವಾಮಿ, ಪುರಸಭೆ, ಎಪಿಎಂಸಿ ಸದಸ್ಯರು, ಜಿಪಂ, ತಾಪಂ ಮಾಜಿ ಸದಸ್ಯರು, ಗ್ರಾಪಂ ಮಾಜಿ ಅಧ್ಯಕ್ಷ,ಸದಸ್ಯರು ಸೇರಿದಂತೆ ನೂರಾರು ಮಂದಿ ಇದ್ದರು.
.ಗಣೇಶ್ ಪ್ರಸಾದ್ ವಾಗ್ದಾಳಿಗುಂಡ್ಲುಪೇಟೆ ಕ್ಷೇತ್ರದಲ್ಲಿ ಹಿಂದಿನ ಶಾಸಕರು ಮಾಡದ ಕೆಲಸಗಳನ್ನು ನಾನು ಕ್ಷೇತ್ರದಲ್ಲಿ ಮಾಡಿದ ಖುಷಿ ಹಾಗೂ ಹೆಮ್ಮೆ ಇದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾಜಿ ಶಾಸಕ ನಿರಂಜನ್ ಕುಮಾರ್ ಹೆಸರೇಳದೆ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕರ ಅವಧಿಯಲ್ಲಿ ಮಹದೇವಪ್ರಸಾದ್ ಕಾಲದಲ್ಲಿ ಮಂಜೂರಾದ ಬೊಮ್ಮನಹಳ್ಳಿ ಅಂಬೇಡ್ಕರ್ ವಸತಿ ಶಾಲೆ, ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ,ಬೇಗೂರು ಹತ್ತಿ ಮಾರುಕಟ್ಟೆ ಗುದ್ದಲಿ ಮಾಡಲು ಆಗಲಿಲ್ಲ.ಅವರ ಅವಧಿಯಲ್ಲಾಗದ ಕೆಲಸಗಳನ್ನು ನನ್ನ ಅವಧಿಯಲ್ಲಿ ಮಾಡಿಸಿದ ಹೆಮ್ಮೆ ಹಾಗು ಖುಷಿಯಂತು ಇದೆ ಎಂದರು.ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳಿಗೆ ಹಣಕಾಸು ಬಿಡುಗಡೆ ಮಾಡಿಸಿದ್ದೀನಿ. ಗೀತಾ ಮಹದೇವಪ್ರಸಾದ್ ಕಾಲದಲ್ಲಿ ಮಂಜೂರಾದ ಕಾಮಗಾರಿ ಬದಲಿಸಿದರು. ಆದರೆ ನಾನು ಅವರ ಕಾಲದಲ್ಲಿ ಮಂಜೂರಾದ ಕಾಮಗಾರಿ ಬದಲಿಸಲಿಲ್ಲ ಎಂದು ನಿರಂಜನ್ ಕುಮಾರ್ ವಿರುದ್ಧ ಮಾತಿನಲ್ಲೇ ಚುಚ್ಚಿದರು.
110 ಕೆರೆ, ಕಟ್ಟೆಗಳಿಗೆ ಡಿಪಿಆರ್ ಆಗಿದೆ. ಸಿಎಂ ಗಮನಕ್ಕೆ ತಂದಿದ್ದೇನೆ. ಅನುಮೋದನೆ ಕೊಡುವ ಭರವಸೆ ಸಿಕ್ಕಿದೆ. ನಿಮ್ಮ ಸಹಕಾರ, ಬೆಂಬಲ ಇರೋ ತನಕ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇನೆ ಎಂದರು.ದಿಗ್ವಿಜಯ
ಫ್ಯಾಕ್ಸ್ ಹಾಗೂ ಹಾಲಿನ ಡೇರಿ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸುತ್ತಿದೆ. ಮುಂಬರುವ ಜಿಪಂ,ತಾಪಂ ಹಾಗೂ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕಾರ್ಯಕರ್ತರೇ ಬುನಾದಿ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿದರು.ಕ್ಷೇತ್ರದ ಕಾರ್ಯಕರ್ತರಿಗೆ ಸಮಸ್ಯೆಗಳಿವೆ ಇಲ್ಲಾ ಎನ್ನಲು ಆಗುತ್ತಿಲ್ಲ.ಯಾವುದೇ ಕೆಲಸಗಳಿರಲಿ ಕಾನೂನಿನ ಚೌಕಟ್ಟಿನಲ್ಲಿ ಆಗಬೇಕು ಎಂಬುದು ನನ್ನ ಬಯಕೆಯಾಗಿದೆ ಕಾರ್ಯಕರ್ತರು ಕೂಡ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಿಸಿಕೊಳ್ಳಿ ಎಂದರು.
ಸಿಎಂ ಬರ್ತಾರೆಗುಂಡ್ಲುಪೇಟೆ ಪಟ್ಟಣಕ್ಕೆ ಎಕ್ಸ್ ಪ್ರೆಸ್ ಲೈನ್ ಕಾಮಗಾರಿ ಬಹುತೇಕ ಮುಗಿದಿದೆ. ಮುಂದಿನ ಎರಡು ತಿಂಗಳಲ್ಲಿ ಸಿಎಂ ಕರೆಸಿ ಹತ್ತು ಸಾವಿರ ಜನ ಸೇರಿಸಿ ಉದ್ಘಾಟಿಸಲು ಚಿಂತನೆ ನಡೆಸಿದ್ದೇನೆ ಎಂದರು.
ಹೇಳಲ್ಲ ಎಂದ ಶಾಸಕ!ಕಾಂಗ್ರೆಸ್ ಮುಖಂಡ ಪ್ರಭುಸ್ವಾಮಿ ಮಾತನಾಡಿ ಪೊಲೀಸರು ಡಿಎಲ್ ಇಲ್ಲ,ಇನ್ಸ್ಯೂರೆನ್ ಇಲ್ಲ, ಆರ್‌ಸಿ ಇಲ್ಲ ಎಂದು ಕೇಸು ಹಾಕ್ತಾರೆ, ಶಾಸಕರಿಗೆ ಹೇಳಿದ್ದರೂ ಬಿಡಿಸಲ್ಲ. ಇದರಿಂದ ಓಟು ನಷ್ಟವಾಗುತ್ತದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಶಾಸಕರು ನಾನು ಕಾನೂನಿಗೆ ಗೌರವ ಕೊಡುವ ಕೆಲಸ ಯಾರೇ ಆದರೂ ಮಾಡಬೇಕು ನಾನು ಶಾಸಕ ಎಂದು ಟೋಲ್ ಕಟ್ಟಲ್ವ ಎಂದರು.