ಮದ್ಯ ಮಾರಾಟ ಇಳಿಕೆ ಬೆನ್ನಲ್ಲೇ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾದ ಅಬಕಾರಿ ಇಲಾಖೆ, ರಾಜ್ಯದ 569 ವೈನ್ ಸ್ಟೋರ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಲೈಸೆನ್ಸ್ ಹರಾಜಿಗೆ ಮುಂದಾಗಿದೆ.
ಬೆಂಗಳೂರು : ಮದ್ಯ ಮಾರಾಟ ಇಳಿಕೆ ಬೆನ್ನಲ್ಲೇ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾದ ಅಬಕಾರಿ ಇಲಾಖೆ, ರಾಜ್ಯದ 569 ವೈನ್ ಸ್ಟೋರ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಲೈಸೆನ್ಸ್ ಹರಾಜಿಗೆ ಮುಂದಾಗಿದೆ.
477 ವೈನ್ ಶಾಪ್ ಹಾಗೂ 92 ಬಾರ್ ಆ್ಯಂಡ್ ರೆಸ್ಟೋರೆಂಟ್ ಲೈಸೆನ್ಸ್ ಹರಾಜು
477 ವೈನ್ ಶಾಪ್ ಹಾಗೂ 92 ಬಾರ್ ಆ್ಯಂಡ್ ರೆಸ್ಟೋರೆಂಟ್ ಲೈಸೆನ್ಸ್‌ಗಳನ್ನು ಇ-ಹರಾಜು ಮಾಡಲು ಅಬಕಾರಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಹರಾಜು ‘ಪ್ರಕ್ರಿಯೆ’ಯಲ್ಲೇ ಸಾವಿರ ಕೋಟಿ ರುಪಾಯಿಗೂ ಅಧಿಕ ಆದಾಯವನ್ನು ಅಬಕಾರಿ ಇಲಾಖೆ ನಿರೀಕ್ಷಿಸಿದೆ. ಇ-ಹರಾಜಿಗೆ ಮದ್ಯ ಮಾರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾದರೂ ಇದನ್ನು ಪರಿಗಣಿಸದೇ ಇಲಾಖೆ ಹರಾಜಿಗೆ ಸನ್ನದ್ಧವಾಗಿದೆ.
ಪರಿಶಿಷ್ಟ ಜಾತಿಯ ‘ಎ’ ಮತ್ತು ‘ಬಿ’ ವರ್ಗಕ್ಕೆ ತಲಾ ಶೇ.6, ‘ಸಿ’ ವರ್ಗಕ್ಕೆ ಶೇ.5 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.7ರಷ್ಟು ಮೀಸಲಾತಿಯನ್ನು ಹರಾಜಿನಲ್ಲಿ ಕಲ್ಪಿಸಲಾಗಿದೆ. ಡಿ.22ರಿಂದ ಬಿಡ್ ನೋಂದಣಿ ಆರಂಭವಾಗಲಿದೆ. ಜ.13 ರಿಂದ 20 ರವರೆಗೂ ನೇರ ಹರಾಜು ನಡೆಯಲಿದೆ. ಇ-ಹರಾಜು ಮತ್ತು ಬಿಡ್ಡಿಂಗ್‌ಗಾಗಿ ನೋಂದಾಯಿಸಿಕೊಳ್ಳುವ ವಿಧಾನ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಮಹಿಳಾ ಆಯೋಗ ವಿರೋಧ:
ಇತ್ತೀಚೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಮದ್ಯದಂಗಡಿಗಳು ಹೆಚ್ಚುತ್ತಿವೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು’ ಎಂದು ಪತ್ರ ಬರೆದ ಬೆನ್ನಲ್ಲೇ 569 ವೈನ್ ಸ್ಟೋರ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಸನ್ನದು ಹರಾಜಿಗೆ ಅಧಿಸೂಚನೆ ಹೊರಡಿಸಲಾಗಿದೆ.

