ಕಾರ್ಮಿಕ ಹಕ್ಕುಗಳ ವಿರುದ್ಧ ಕೇಂದ್ರದ ಧಮನಕಾರಿ ನೀತಿ ಖಂಡನೀಯ

KannadaprabhaNewsNetwork | Published : May 11, 2025 11:51 PM
Follow Us

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ನೇತೃತ್ವದಲ್ಲಿ ಪ್ರಗತಿಪರ ಸಮಾನ ಮನಸ್ಕ ಸಂಘ-ಸಂಸ್ಥೆಗಳ ಮತ್ತು ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳು, ಕಾರ್ಮಿಕ ವರ್ಗದ ಗುಲಾಮಗಿರಿಯನ್ನು ಕಾನೂನು ಬದ್ಧಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ದೊಡ್ಡಬಳ್ಳಾಪುರ: ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ನೇತೃತ್ವದಲ್ಲಿ ಪ್ರಗತಿಪರ ಸಮಾನ ಮನಸ್ಕ ಸಂಘ-ಸಂಸ್ಥೆಗಳ ಮತ್ತು ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳು, ಕಾರ್ಮಿಕ ವರ್ಗದ ಗುಲಾಮಗಿರಿಯನ್ನು ಕಾನೂನು ಬದ್ಧಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಜೆಸಿಟಿಯು ಜಿಲ್ಲಾ ಸಂಚಾಲಕ ಪಿ.ಎ.ವೆಂಕಟೇಶ್ ಮಾತನಾಡಿ, ಇದೇ ಮೇ 20ರಂದು ಜೆಸಿಟಿಯು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೆ ಬೆಂಬಲವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲವಾಗಿ ನಿಂತಿದೆ. ರೈತರು, ಕಾರ್ಮಿಕರು ತುಂಬಾ ಕಷ್ಟಪಟ್ಟು ತ್ಯಾಗ ಬಲಿದಾನಗಳಿಂದ ಪಡೆದುಕೊಂಡಿದ್ದ ಸಂವಿಧಾನ ಬದ್ಧ ಹಕ್ಕುಗಳನ್ನು ನಿರ್ನಾಮ ಮಾಡಿ ಆಧುನಿಕ ಗುಲಾಮಗಿರಿಗೆ ತಳ್ಳುವ ನಾಲ್ಕು ಸಂಹಿತೆಗಳನ್ನು ಜಾರಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿದ್ದು, ಪ್ರಗತಿಪರ ಚಿಂತನೆಯುಳ್ಳ ಎಲ್ಲರೂ ಇದನ್ನು ವಿರೋಧಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.

ಮೇ 20ರ ಸಾರ್ವತ್ರಿಕ ಮುಷ್ಕರದ ಭಾಗವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಸಿಟಿಯು ನೇತೃತ್ವದಲ್ಲಿ ಮೇ15ರಂದು ಪ್ರಚಾರ ಜಾಥಾ ನಡೆಸಲು ತೀರ್ಮಾನಿಸಲಾಯಿತು. ಅದೇ ರೀತಿ ಮೇ 17ರಂದು ಬೈಕ್ ರ್ಯಾಲಿ ನಡೆಸಲು ನಿರ್ಧರಿಸಲಾಯಿತು. ಮೇ 20ರಂದು ಸಂಘಟಿತ, ಅಸಂಘಟಿತ, ಸ್ಕೀಮ್ ನಲ್ಲಿ ದುಡಿಯುವ ಎಲ್ಲಾ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅದೇ ದಿನ ಬೆಳಗ್ಗೆ ದೊಡ್ಡಬಳ್ಳಾಪುರದ ಡಿ ಕ್ರಾಸ್ ನಲ್ಲಿ ರೈತ ಸಂಘದ ನೇತೃತ್ವದಲ್ಲಿ ಸಿಪಿಐಎಂ, ಕೆ ಆರ್ ಎಸ್, ಕನ್ನಡ ಪಕ್ಷ, ಎಎಪಿ, ಸರ್ವೋದಯ ಜನಶಕ್ತಿರೈತ ಸಂಘ ಮತ್ತು ರೈತರು, ದಲಿತರು, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲು ತೀರ್ಮಾನಿಸಲಾಯಿತು.

ಜಂಟಿ ಸಭೆಯಲ್ಲಿ ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯಕ್, ಮುನಿ ಪಾಪಯ್ಯ, ವೆಂಕಟೇಶ್, ಕೆಆರ್‌ಎಸ್‌ ಪಕ್ಷದ ಬಿ.ಶಿವಶಂಕರ್, ಎಚ್.ಎನ್.ವೇಣು, ಶ್ರೀನಿವಾಸ್ ಡಿ.ಎಂ, ಸಿಪಿಐಎಂ ಪಕ್ಷದ ಮುಖಂಡರಾದ ಆರ್.ಚಂದ್ರತೇಜಸ್ವಿ, ಎಸ್. ರುದ್ರರಾಧ್ಯ , ಜನಶಕ್ತಿ ರೈತ ಸಂಘದ ರಮೇಶ್ ಸಂಕ್ರಾಂತಿ, ಎಸ್ಸಿಲಾರ್ ಕಾರ್ಮಿಕ ಸಂಘದ ಮುಖಂಡರಾದ ಜಯಣ್ಣ , ಆನಂದ್ ಕುಮಾರ್, ಸಿಐಟಿಯು ಮುಖಂಡ ರೇಣುಕರಾಧ್ಯ, ಕೆಪಿಆರ್‌ಎಸ್ ಮುಖಂಡರಾದ ಶಿವಲಿಂಗಯ್ಯ, ದಾಳಪ್ಪ, ಎಆರ್‌ಡಿಯು ಸಂಘದ ಸಾಧಿಕ್ ಪಾಷಾ ಇತರರು ಪಾಲ್ಗೊಂಡಿದ್ದರು.

11ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ನೇತೃತ್ವದಲ್ಲಿ ಪ್ರಗತಿಪರ ಸಮಾನ ಮನಸ್ಕ ಸಂಘ-ಸಂಸ್ಥೆಗಳ ಮತ್ತು ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಯಿತು.