)
ಕನ್ನಡಪ್ರಭ ವಾರ್ತೆ ಹೊಳೆನರಸೀಪುರದೇವೇಗೌಡರ ಪತ್ನಿ ಚನ್ನಮ್ಮರ ಅಂತ್ಯಕ್ರಿಯೆ ಸೋಮವಾರ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು. ಚನ್ನಮ್ಮರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ರಾಜಕೀಯ ಪ್ರಮುಖ ನಾಯಕರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಹರದನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸಾಗರೋಪಾದಿಯಲ್ಲಿ ಆಗಮಿಸಿ ಚನ್ನಮ್ಮನವರಿಗೆ ಅಶ್ರುತರ್ಪಣ ಸಲ್ಲಿಸಿದರು.ಸಾರ್ವಜನಿಕರಿಗೆ ವಿಶೇಷ ಸಾರಿಗೆಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಿಂದ ವಿಶೇಷ ಕೆಎಸ್‌ಆರ್‌ಟಿಸಿ ಹಾಗೂ ಇತರ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಹೋಬಳಿ ಕೇಂದ್ರಗಳಾದ ಸಾಲಗಾಮೆ, ದುದ್ದ, ಶಾಂತಿಗ್ರಾಮ, ಕಂದಲಿ, ಗಂಡಸಿ, ಚನ್ನರಾಯಪಟ್ಟಣ, ಅರಸೀಕೆರೆ, ಬೇಲೂರು, ಆಲೂರು ಸೇರಿದಂತೆ ವಿವಿಧ ಭಾಗಗಳಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಚನ್ನಮ್ಮ ಅವರ ಅಗಲಿಕೆಯಿಂದ ದೇವೇಗೌಡರ ಹುಟ್ಟೂರು ಹರದನಹಳ್ಳಿ, ಹೊಳೆನರಸೀಪುರ ಹಾಗೂ ಇಡೀ ಹಾಸನ ಜಿಲ್ಲೆಯಲ್ಲಿ ಶೋಕದ ವಾತಾವರಣ ಆವರಿಸಿತ್ತು. ಅವರು ಪ್ರಧಾನಮಂತ್ರಿಯ ಪತ್ನಿಯಾಗಿದ್ದರೂ ಎಂದಿಗೂ ಅಹಂಕಾರ ತೋರಲಿಲ್ಲ. ಗ್ರಾಮಕ್ಕೆ ಬಂದಾಗಲೆಲ್ಲಾ ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು ಎಂದು ಗ್ರಾಮದ ಹಿರಿಯರು ಸ್ಮರಿಸಿದರು.
ಚನ್ನಮ್ಮ ಅವರಿಗೆ ತಮ್ಮ ನಾಲ್ಕು ಗಂಡು ಮಕ್ಕಳಲ್ಲಿ ರೇವಣ್ಣ ಅವರ ಮೇಲೆ ಕೊಂಚ ಪ್ರೀತಿ ಹೆಚ್ಚಿಗೆಯೇ ಇತ್ತು. ಹಾಗೆಯೇ ಅಮ್ಮ ಎಂದರೆ ರೇವಣ್ಣ ಅವರಿಗೂ ಕೂಡ ಭಾರೀ ಪ್ರೀತಿ. ತಮ್ಮ ಅಪ್ಪ ದೇವೇಗೌಡರು ಹಾಗೂ ಸಹೋದರ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹಾಸನ ಜಿಲ್ಲೆಗೆ ಆಗಬೇಕಿದ್ದ ಕೆಲಸಗಳ ಬಗ್ಗೆ ಮೊದಲು ಹೇಳುತ್ತಿದ್ದುದು ಅಮ್ಮನ ಬಳಿಯೇ. ಅವರ ಗಮನಕ್ಕೆ ತಂದು ಅಮ್ಮನ ಮೂಲಕ ಅಪ್ಪ ಹಾಗೂ ಸಹೋದರನ ಮೇಲೆ ಒತ್ತಡ ಹೇರಿಸುತ್ತಿದ್ದರು. ಹಾಗಾಗಿ ಅಮ್ಮ- ಮಗನ ಸಂಬಂಧ ಭಾರೀ ಆಳವಾಗಿತ್ತು. ಇದೀಗ ಅಂತಹ ಅಮ್ಮನನ್ನು ಕಳೆದುಕೊಂಡ ರೇವಣ್ಣ ಅವರು ಶನಿವಾರದಿಂದಲೂ ಮಗುವಿನಂತೆ ಬಿಕ್ಕಿಬಿಕ್ಕಿ ಅಳುತ್ತಲೇ ಇದ್ದಾರೆ. ಸೋಮವಾರ ಕೂಡ ಅಂತಿಮವಾಗಿ ಪುಷ್ಪನಮನ ಸಲ್ಲಿಸುವ ಸಂದರ್ಭದಲ್ಲಿ ಅಮ್ಮ ಚನ್ನಮ್ಮನವರ ಕೆನ್ನೆಗೆ ಎರಡು ಬಾರಿ ಮುತ್ತು ಕೊಟ್ಟು ಕಂಬನಿ ಮಿಡಿದ ದೃಶ್ಯ ಅಮ್ಮ-ಮಗನ ನಡುವಿನ ಪ್ರೀತಿಗೆ ಕನ್ನಡಿ ಹಿಡಿದಂತಿತ್ತು.