ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರಸಭೆಯ ಪ್ರಸ್ತುತ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಮಡಿಕೇರಿ ನಗರದ ಇತಿಹಾಸದಲ್ಲಿ ಇಂತಹ ಅವ್ಯವಸ್ಥೆ ಹಿಂದೆಂದೂ ಕಾಣಲಿಲ್ಲ ಎಂದು ಮಡಿಕೇರಿ ನಗರ ಸಭೆಯ ಕಾಂಗ್ರೆಸ್ ಸದಸ್ಯ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಆರೋಪಿಸಿದ್ದಾರೆ.ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ತಮ್ಮ ವಿಶೇಷ ಅನುದಾನದಡಿ ಮೂರು ಕೋಟಿ ರು. ಗಳನ್ನು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದಾರೆ. ಅದರಿಂದ ಮಡಿಕೇರಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ನಗರ ಸಭೆಯಿಂದ ನಯಾಪೈಸೆಯ ಕಾಮಗಾರಿ ಆಗಿಲ್ಲ ಎಂದು ಟೀಕಿಸಿದರು.ಹದಿನಾರು ಬಿಜೆಪಿ ಸದಸ್ಯರನ್ನು ಹೊಂದಿದ್ದು, ಉತ್ತಮ ಆಡಳಿತ ನಡೆಸುವ ಬದಲಿಗೆ ಗುಂಪುಗಾರಿಕೆ, ಕಿತ್ತಾಟಗಳಲ್ಲಿ ಕಾಲ ಕಳೆಯುತ್ತಾ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ಈ ಬಾರಿ ಪ್ರಾಕೃತಿಕ ವಿಕೋಪ ಪರಿಹಾರದ ಅನುದಾನದಲ್ಲಿ 38 ಲಕ್ಷ ರು. ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಾಗ ಕೆಲವು ಬಿಜೆಪಿ ಸದಸ್ಯರು ತಾವು ಅವಲಂಬಿತವಾಗಿರುವ ಗುತ್ತಿಗೆದಾರರಿಗೆ ಕೆಲಸ ಸಿಗಲಿಲ್ಲ ಎಂದು ಕೆಲಸಕ್ಕೆ ತಡೆ ಒಡ್ಡಿ ಆ ಕಾಮಗಾರಿ ಕೆ.ಆರ್.ಐ.ಡಿ.ಎಲ್ ಗೆ ವಹಿಸುವಂತೆ ವಿಳಂಬಕ್ಕೆ ಎಡೆ ಮಾಡಿದರು. ರಾಜಾಸೀಟ್ ಪಾರ್ಕಿಂಗ್ ವಿಚಾರದಲ್ಲಿ ಟೆಂಡರ್ ಹಣ ಕಟ್ಟಿಸಿಕೊಳ್ಳದೆನಗರಸಭೆಗೆ ನಷ್ಟ ಮಾಡಿದ್ದಾರೆ. ಮೀನು ಮಾರಾಟ ಟೆಂಡರ್ ವಿಚಾರದಲ್ಲಿ ಮತ್ತೊಂದು ರೀತಿ ವ್ಯವಹರಿಸಿ ಇಬ್ಬಗೆಯ ನೀತಿ ಪ್ರದರ್ಶನ ಮಾಡಿದರು ಎಂದು ಆರೋಪಿಸಿದ್ದಾರೆ.ಮೈಸೂರು ರಸ್ತೆಯಲ್ಲಿ ಅಪಾಯಕಾರಿ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆ ಸಂಕೀರ್ಣದಲ್ಲಿ ಬಿಜೆಪಿ ಮುಖಂಡರು ಪಾಲುದಾರರಾಗಿರುವ ಕಾರಣ ನಗರಸಭೆಯ ಆಡಳಿತ ಮಂಡಳಿ ಅಕ್ರಮಕ್ಕೆ ಬಹಿರಂಗವಾಗಿ ಪ್ರೋತ್ಸಾಹ ನೀಡಿರುವುದು ಜಗಜ್ಜಾಹೀರ್ ಆಗಿದೆ. ನಗರಸಭೆಯ ಕಾನೂನು ಸಲಹೆಗಾರರು ಅಧಿಕೃತವಾಗಿ ಕಟ್ಟಡ ತೆರವುಗೊಳಿಸಲು ಸೂಚಿಸಿದ್ದರೂ ಭಂಡತನದಿಂದ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ರಾಜೇಶ್ ಯಲ್ಲಪ್ಪ ಆರೋಪಿಸಿದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, ಸ್ವತಃ ನಗರಸಭೆಯ ಕಮಿಷನರ್ ರವರೇ ಸಾಮಾನ್ಯ ಸಭೆಯಲ್ಲಿ ಮೈಸೂರು ರಸ್ತೆಯ ಅನಧಿಕೃತ ವ್ಯಾಪಾರ ಮಳಿಗೆ ನಿರ್ಮಾಣದಲ್ಲಿ 9 ಗುರುತರ ತಪ್ಪುಗಳು ಕಂಡು ಬಂದಿದೆ ಎಂದು ಉತ್ತರಿಸಿದರೂ ಸೂಕ್ತ ಕ್ರಮ ಜರುಗಿಸದೇ ಇರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಯಾವುದೇ ವ್ಯಾಪಾರ ಪರವಾನಿಗೆ ಪಡೆದಿರುವುದಿಲ್ಲ ಎಂಬ ಲಿಖಿತ ಉತ್ತರ ನಗರ ಸಭೆ ಸಹಿ ಮತ್ತು ಮೊಹರಿನಿಂದ ನೀಡಿದೆ. ಈ ನಿಟ್ಟಿನಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ರೀತಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಮೇಲಿನ ಪ್ರಾಧಿಕಾರದ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ಕೋರಲಾಗುವುದು ಎಂದು ತಿಳಿಸಿದ ಅವರು, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ನಗರ ಸಭೆ ನಾಮನಿರ್ದೇಶನ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಯಾಕುಬ್, ಮುದ್ದುರಾಜ್ ಉಪಸ್ಥಿತರಿದ್ದರು.