ಬರದ ಹೊಡೆತ, ಬೆಲೆ ಏರಿಕೆ ಬಿಸಿಗೆ ಕೇಳಲಿಲ್ಲ ಕನ್ನಡ ಕಹಳೆ

KannadaprabhaNewsNetwork |  
Published : Nov 15, 2026, 01:15 AM IST
14ಕೆಪಿಆರ್‌ಸಿಆರ್ 10:  | Kannada Prabha

ಸಾರಾಂಶ

ಬಿಸಿಲ ನಾಡಿನೊಂದಿಗೆ ಬರದ ಬೀಡಾಗಿ ಮಾರ್ಪಟ್ಟಿರುವ ರಾಯಚೂರಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಅಕ್ಷರ ಜಾತ್ರೆಯಲ್ಲಿ ಜೋರಾಗಿ ಮೊಳಗಬೇಕಾಗಿದ್ದ ಕನ್ನಡ ಡಿಂಡಿಮವು ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ಕಳೆಕಟ್ಟಿದ್ದಿಲ್ಲ, ಎಲ್ಲೆಡೆ ಆವರಿಸಿರುವ ತೀವ್ರ ಬರ ಛಾಯೆಯ ಹೊಡೆತ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದಾಗಿ ಉತ್ಸಾಹ ಕಳೆದುಕೊಂಡ ಜನಸಾಮಾನ್ಯರು ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆಯಾಗಿದ್ದರ ಪರಿಣಾಮವಾಗಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಕನ್ನಡ ಕಹಳೆಯು ಅಷ್ಟಾಗಿ ಕೇಳಲಿಲ್ಲ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಬಿಸಿಲ ನಾಡಿನೊಂದಿಗೆ ಬರದ ಬೀಡಾಗಿ ಮಾರ್ಪಟ್ಟಿರುವ ರಾಯಚೂರಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಅಕ್ಷರ ಜಾತ್ರೆಯಲ್ಲಿ ಜೋರಾಗಿ ಮೊಳಗಬೇಕಾಗಿದ್ದ ಕನ್ನಡ ಡಿಂಡಿಮವು ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ಕಳೆಕಟ್ಟಿದ್ದಿಲ್ಲ, ಎಲ್ಲೆಡೆ ಆವರಿಸಿರುವ ತೀವ್ರ ಬರ ಛಾಯೆಯ ಹೊಡೆತ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದಾಗಿ ಉತ್ಸಾಹ ಕಳೆದುಕೊಂಡ ಜನಸಾಮಾನ್ಯರು ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆಯಾಗಿದ್ದರ ಪರಿಣಾಮವಾಗಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಕನ್ನಡ ಕಹಳೆಯು ಅಷ್ಟಾಗಿ ಕೇಳಲಿಲ್ಲ.

ಸ್ಥಳೀಯ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯ ಹಿಂಭಾಗದಲ್ಲಿ ಸಮ್ಮೇಳನಾಧ್ಯಕ್ಷರ ಹೆಸರೇ ತಪ್ಪಾಗಿ ಅಚ್ಚಾಗಿರುವುದು, ನಿರೂಪಕನಿಂದ ಅಧ್ಯಕ್ಷರಿಗೆ ಅಗೌರವ, ಎಂದಿನಂತೆ ಜಿಲ್ಲಾ ಉಸ್ತುವಾರಿ ಸಚಿವರ ಅವಸರದ ನಡೆ, ಜಿಲ್ಲಾ ಕಾಂಗ್ರೆಸ್ ಪಕ್ಷದ ಒಂದು ಬಣ ಸಮ್ಮೇಳನದ ಕಡೆ ಮುಖ ಮಾಡದೇ ಇರುವುದು, ಡಿಸಿ, ಸಿಇಒ ಅವರ ಗೈರು, ಇದರೊಟ್ಟಿಗೆ ಸಮ್ಮೇಳನದಲ್ಲಿ ಆಕರ್ಷಣೀಯ ಬಿಂದುವಾಗಬೇಕಾಗಿದ್ದ ಚಿತ್ರಕಲಾ ಪ್ರದರ್ಶನ, ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳು ಹೊಸತನವಿಲ್ಲದೇ ಸೋತದ್ದು, ಹೀಗೆ ಹತ್ತು ಹಲವು ಎಡವಟ್ಟುಗಳಿಗೆ ಸಮ್ಮೇಳನದ ಮೊದಲ ದಿನ ಸಾಕ್ಷಿಯಾಗಿತ್ತು.

ಸರ್ವಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಬೇಕಾಗಿದ್ದ ಜಿಲ್ಲಾಧಿಕಾರಿ ಪೂವಿತಾ.ಎಸ್‌ ಅವರು ಗೈರಾಗಿದ್ದರು. ಇನ್ನು ರಂಗಮಂದಿರದ ಆವರಣದಲ್ಲಿ ಹಾಕಲಾಗಿದ್ದ 19 ಮಳಿಗೆಗಳಲ್ಲಿ ಚಿತ್ರಕಲಾ ಪ್ರದರ್ಶನ, ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳು ಜನರನ್ನು ಆಕರ್ಷಿಸುವಲ್ಲಿ ವಿಫಲಕಂಡಿತು. ಶಿಕ್ಷಕರು, ಸಾಹಿತಿಗಳು, ಕೆಲ ರಾಜಕೀಯ ನಾಯಕರು, ಅಧಿಕಾರಿ, ಸಿಬ್ಬಂದಿ, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಬಿಟ್ಟರೆ ಜನಸಾಮಾನ್ಯರು ಸಮ್ಮೇಳನದ ಕಡೆ ಉಳಿಯಲೇ ಇಲ್ಲ.ನಿರೂಪಕನಿಂದ ಅಗೌರವ: ಉದ್ಘಾಟನಾ ಸಮಾರಂಭದಲ್ಲಿ ನಿರೂಪಕನಿಂದ ಸಮ್ಮೇಳನಾಧ್ಯಕ್ಷರಿಗೆ ಅಗೌರವ ತೋರಿದಂತಹ ಪ್ರಸಂಗ ನಡೆಯಿತು. ಉದ್ಘಾಟನಾ ಸಮಾರಂಭದ ನಿರ್ವಹಣೆಯ ಹೊಣೆ ಹೊತ್ತಿದ್ದ ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಅವರು ಕಾರ್ಯಕ್ರಮ ಆರಂಭದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತಗೊಂಡಿದ್ದ ಗಣ್ಯರನ್ನು ಸ್ವಾಗತಿಸುವ ಭರದಲ್ಲಿ, ಸಮ್ಮೇಳನಾಧ್ಯಕ್ಷ ರಾಮಣ್ಣ ಹವಳೆ ಅವರ ಹೆಸರನ್ನೇ ಮರೆತು ಬಿಟ್ಟಿದ್ದರು, ವೇದಿಕೆಗೆ ಜನಪ್ರತಿನಿಧಿಗಳು, ಇತರೆ ಗಣ್ಯರನ್ನು ಕರೆದ ನಿರೂಪಕ ಡಾ.ಬಿ.ವಿಜಯ ರಾಜೇಂದ್ರ ಅವರು ಕೊನೆವರೆಗೂ ಸಮ್ಮೇಳನಾಧ್ಯಕ್ಷರನ್ನು ಕರೆಯಲೇ ಇಲ್ಲ ಇದನ್ನು ಗಮನಿಸಿದ ಪತ್ರಕರ್ತರು ಸಮ್ಮೇಳನಾಧ್ಯಕ್ಷರ ಹೆಸರನ್ನು ಹೇಳುವಂತೆ ನಿರೂಪಕನಿಗೆ ಸೂಚಿಸಿದರು, ತಕ್ಷಣ ತಪ್ಪನ್ನು ತಿದ್ದಿಕೊಂಡು ಹೆಸರನ್ನು ಕರೆದರು.

ಬ್ಯಾನರ್‌ನಲ್ಲಿಯೇ ತಪ್ಪಾದ ಸಮ್ಮೇಳನಾಧ್ಯಕ್ಷರ ಹೆಸರು: ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ವಿಶ್ರಾಂತ ಅಧ್ಯಾಪಕ, ಶಿಕ್ಷಣ ತಜ್ಞ, ಇತಿಹಾಸಕಾರ ರಾಮಣ್ಣ ಹವಳೆ ಅವರ ಹೆಸರೇ ಬ್ಯಾನರ್‌ನಲ್ಲಿ ತಪ್ಪಾಗಿ ಮುದ್ರಿತಗೊಂಡಿತ್ತು. ರಂಗಮಂದಿರದ ಮುಖ್ಯವೇದಿಕೆಯ ಹಿಂಭಾಗದಲ್ಲಿ ಸಮ್ಮೇಳನಾಧ್ಯಕ್ಷರ ಭಾವಚಿತ್ರದ ಕೆಳಗಡೆ ರಾಮಣ್ಣ ಹವಳೆ ಎಂದಾಗಬೇಕಾಗಿದ್ದ ಹೆಸರು ರಾಮ್ಮಣ್ಣ ಹವಳೆ ಎಂದು ಮುದ್ರಿತಗೊಂಡಿತ್ತು. ಇದರಿಂದಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನರು ಈ ತಪ್ಪನ್ನು ಕಂಡು ಹಿಡಿದು ಪಕ್ಕದವರ ಗಮನಕ್ಕೆ ತರುತ್ತಿದ್ದ ದೃಶ್ಯಗಳು ಕಂಡುಬಂದವು.

ಉಸ್ತುವಾರಿ ಸಚಿವರ ಅವಸರ: ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ಅವರ ಅವಸರದ ನಡೆಯು ಸಭಿಕರಲ್ಲಿ ಬೇಸರ ಮೂಡಿಸಿತ್ತು. ಜಲ್ದಿ ಜಲ್ದಿಯಾಗಿಯೇ ಉದ್ಘಾಟನೆ, ಭಾಷಣ, ಸನ್ಮಾನ ಸ್ವೀಕರಿಸಿ ವೇದಿಕೆಯಲ್ಲಿ ಹೆಚ್ಚು ಕಾಲ ಉಳಿಯದೇ ನಿರ್ಗಮಿಸಿದರು. ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿಯೂ ಸಹ ಉಸ್ತುವಾರಿ ಸಚಿವರು ಅವಸರದಲ್ಲಿಯೇ ಕಾರ್ಯಕ್ರಮ ಮುಗಿಸಿ ಹೋಗಿ ಶಿಕ್ಷಕರ ಅಸಮಧಾನಕ್ಕೆ ಕಾರಣವಾಗಿದ್ದ ಅವರು ಮತ್ತೆ ಅದೇ ಚಾಳಿಯನ್ನು ಸಮ್ಮೇಳನದಲ್ಲಿ ತೋರಿ ಸಾಹಿತ್ಯಾಸಕ್ತರಲ್ಲಿ ಬೇಸರ ತರಿಸಿದರು.

ಮುಖ ತೋರಿಸಲಿಲ್ಲ ಮತ್ತೊಂದು ಬಣದವರು: ಜಿಲ್ಲಾ ಕಾಂಗ್ರೆಸ್‌ ಸಮಿತಿಯಲ್ಲಿ ಬಣಗಳ ನಡುವಿನ ಸಂಘರ್ಷವು ಸಮ್ಮೇಳನಕ್ಕೂ ಹಬ್ಬಿತ್ತು. ಸಮ್ಮೇಳನದ ಇಡೀ ಜವಾಬ್ದಾರಿಯನ್ನು ಮಾಜಿ ಸಚಿವ, ಎಂಎಲ್ಸಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎಸ್‌.ಬೋಸರಾಜು ಅವರು ವಹಿಸಿಕೊಂಡಿದ್ದರಿಂದ, ಮತ್ತೊಂದು ಬಣದ ಎಂಎಲ್ಸಿ ಎ.ವಸಂತ ಕುಮಾರ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಅವರ ಬಣದ ನಾಯಕರು ಸಮ್ಮೇಳನದ ಕಡೆ ಮುಖ ಮಾಡಲಿಲ್ಲ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮಾತ್ರ ಮೆರವಣಿಗೆಯಲ್ಲಿ ಮುಖ ತೋರಿ, ವೇದಿಕೆ ಕಾರ್ಯಕ್ರಮಕ್ಕೆ ಗೈರಾಗಿದ್ದರು.

-----

ಮುಖ್ಯವೇದಿಕೆಯ ಹಿಂಬದಿಯ ಬ್ಯಾನರ್‌ನಲ್ಲಿ ಸಮ್ಮೇಳನಾಧ್ಯಕ್ಷರ ರಾಮ್ಮಣ್ಣ ಹವಳೆ ಎಂದು ತಪ್ಪಾಗಿ ಮುದ್ರಿತಗೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೇ ಕಾರ್ಯಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರ ಘೇರಾವ್
ನಂದನ ಪ್ಯಾಲೇಸ್‌ನಿಂದ ಸಿಬ್ಬಂದಿಗೆ ಕಾರ್, ಬೈಕ್ ಗಿಫ್ಟ್‌