ಸಿಂಪಿಗರ ಮನೆಯಲ್ಲಿ ‘ಮಣ್ಣಿನ ಗಣಪ’ ಫೇಮಸ್!

KannadaprabhaNewsNetwork |  
Published : Sep 14, 2026, 02:15 AM IST
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಸಿಂಪಿ ಸಮುದಾಯದ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗುವ ಮಣ್ಣಿನ ಗಣಪತಿ. | Kannada Prabha

ಸಾರಾಂಶ

ಮಿಶ್ರಿಕೋಟಿ ಗ್ರಾಮದ ಸಿಂಪಿ ಸಮುದಾಯದ ಮನೆಗಳಲ್ಲಿ ಮಾತ್ರ ಇಂದಿಗೂ ಶುದ್ಧ ಮಣ್ಣಿನ ಗಣಪತಿಗೇ ಅಗ್ರಸ್ಥಾನ. ತಲೆ-ತಲಾಂತರಗಳಿಂದ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಪಿಸಿ, ಏಳು ದಿನಗಳ ಕಾಲ ವಿಶಿಷ್ಟ ರೀತಿಯಲ್ಲಿ ಪೂಜಿಸುವ ಈ ಸಮುದಾಯದ ಸಂಪ್ರದಾಯ ಈಗಲೂ ಜೀವಂತವಾಗಿದೆ.

ಈರಪ್ಪ ನಾಯ್ಕರ್

ಕಲಘಟಗಿ:

ಗಣೇಶ ಚತುರ್ಥಿ ಎಂದರೆ ಬಣ್ಣ-ಬಣ್ಣದ, ವಿವಿಧ ವಿನ್ಯಾಸಗಳ ಗಣಪತಿ ಮೂರ್ತಿಗಳದ್ದೇ ಕಾರುಬಾರು. ಆದರೆ, ಮಿಶ್ರಿಕೋಟಿ ಗ್ರಾಮದ ಸಿಂಪಿ ಸಮುದಾಯದ ಮನೆಗಳಲ್ಲಿ ಮಾತ್ರ ಇಂದಿಗೂ ಶುದ್ಧ ಮಣ್ಣಿನ ಗಣಪತಿಗೇ ಅಗ್ರಸ್ಥಾನ. ತಲೆ-ತಲಾಂತರಗಳಿಂದ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಪಿಸಿ, ಏಳು ದಿನಗಳ ಕಾಲ ವಿಶಿಷ್ಟ ರೀತಿಯಲ್ಲಿ ಪೂಜಿಸುವ ಈ ಸಮುದಾಯದ ಸಂಪ್ರದಾಯ ಈಗಲೂ ಜೀವಂತವಾಗಿದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳು, ರಾಸಾಯನಿಕ ಬಣ್ಣಗಳ ಆಕರ್ಷಣೆ ಹೆಚ್ಚುತ್ತಿರುವ ಕಾಲದಲ್ಲೂ ಸಿಂಪಿ ಸಮುದಾಯದವರು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯನ್ನೇ ಆಯ್ಕೆ ಮಾಡುತ್ತಿರುವುದು ವಿಶೇಷ. ಹೀಗಾಗಿ ಮಿಶ್ರಿಕೋಟಿಯಲ್ಲಿ ಈ ಗಣಪತಿ ಮೂರ್ತಿಗಳು "ಸಿಂಪಿಗರ ಮನೆಯಲ್ಲಿ ಕೂಡಿಸುವ ಗಣಪತಿ " ಎಂದೇ ಪ್ರಸಿದ್ಧಿ ಪಡೆದಿವೆ.

ಗ್ರಾಮದಲ್ಲಿ 30ಕ್ಕೂ ಹೆಚ್ಚು ಸಿಂಪಿ ಸಮುದಾಯದ ಮನೆತನಗಳಿವೆ. ಪ್ರತಿಯೊಂದು ಮನೆಯಲ್ಲೂ ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರದ ಮಣ್ಣಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮೂರ್ತಿಯ ಮೈಮೇಲಿನ ಆಭರಣಗಳಿಗೆ ವಿಶೇಷ ವಿನ್ಯಾಸ ನೀಡಲಾಗುತ್ತದೆ. ಧೋತಿಗೆ ಹಳದಿ, ಬಿಳಿ, ಕೇಸರಿ ಸೇರಿದಂತೆ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ. ಕೆಲ ಮನೆಗಳಲ್ಲಿ ಕೆಂಪು ವರ್ಣದ ಗಣಪತಿಯನ್ನೂ ಪೂಜಿಸಲಾಗುತ್ತದೆ.

ಮೂಸಿಕನಿಗೆ ಮಾಂಸದ ನೈವೇದ್ಯ:

ಇಲ್ಲಿನ ಗಣೇಶೋತ್ಸವದ ಮತ್ತೊಂದು ಕುತೂಹಲಕಾರಿ ಆಚರಣೆ ‘ಇಲಿಯ ವಾರ’. ಗಣೇಶ ಪ್ರತಿಷ್ಠಾಪನೆಯ 2ನೇ ದಿನ ಈ ಆಚರಣೆ ನಡೆಯುತ್ತದೆ. ಗಣಪತಿಯ ವಾಹನವಾದ ಮೂಸಿಕನಿಗೆ ಮಾಂಸಾಹಾರವನ್ನು ನೈವೇದ್ಯವಾಗಿ ಅರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ನಾಲ್ಕನೇ ದಿನ ಗೌರಿ ಪ್ರತಿಷ್ಠಾಪನೆ ನಡೆಯುತ್ತದೆ. ಐದನೇ ದಿನ ಕೆಲವರ ಮನೆಗಳಲ್ಲಿ ಅಷ್ಟಮಿ ಪೂಜೆ ನೆರವೇರುತ್ತದೆ. ಹೀಗೆ 7 ದಿನ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆ ನೆರವೇರಿಸಲಾಗುತ್ತದೆ.

ಒಂದೇ ಕಡೆ ಗಣಪತಿ ವಿಸರ್ಜನೆ:

ಏಳನೇ ದಿನ ಇಡೀ ಸಮುದಾಯವೇ ಒಂದೆಡೆ ಸೇರುತ್ತದೆ. ಎಲ್ಲ ಮನೆಗಳಲ್ಲಿನ ಗಣಪತಿ ಮೂರ್ತಿಗಳನ್ನು ಒಂದೇ ಸ್ಥಳಕ್ಕೆ ತಂದು, ಅಲ್ಲಿ ಹಳ್ಳ ತೋಡಿ ನೀರು ತುಂಬಿಸಿ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುತ್ತದೆ. ಈ ಆಚರಣೆಯಲ್ಲಿ ಇತರ ಸಮುದಾಯದವರೂ ಪಾಲ್ಗೊಂಡು ಸಂಭ್ರಮ ಹಂಚಿಕೊಳ್ಳುವುದು ಇಲ್ಲಿನ ಮತ್ತೊಂದು ವಿಶೇಷ.

ಪೌರಾಣಿಕ ನಂಟು:

ಪೌರಾಣಿಕ ಕಥೆಗಳ ಪ್ರಕಾರ, ಪಾರ್ವತಿ ದೇವಿಯು ಅರಿಶಿನ ಹಾಗೂ ಮಣ್ಣಿನಿಂದ ಗಣೇಶನ ಆಕೃತಿ ಸೃಷ್ಟಿಸಿ ಅದಕ್ಕೆ ಜೀವ ನೀಡಿದಳು ಎನ್ನಲಾಗುತ್ತದೆ. ಹೀಗಾಗಿ ಮಣ್ಣಿನಿಂದ ಗಣಪತಿ ಮೂರ್ತಿ ತಯಾರಿಸಿ ಪೂಜಿಸುವ ಸಂಪ್ರದಾಯಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಮಣ್ಣಿನ ಮೂರ್ತಿಯ ಬಳಕೆ ಪರಿಸರ ಸ್ನೇಹಿಯಾಗಿರುವುದರಿಂದ ಸಿಂಪಿ ಸಮುದಾಯದ ಆಚರಣೆ ಪರಂಪರೆಯೊಂದಿಗೆ ಪರಿಸರ ಕಾಳಜಿಯನ್ನೂ ಸಾರುತ್ತದೆ.

ನಮ್ಮ ಸಮುದಾಯದಲ್ಲಿ ತಲೆ-ತಲಾಂತರಗಳಿಂದ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಏಳು ದಿನಗಳ ಆಚರಣೆಯ ಬಳಿಕ ಎಲ್ಲರೂ ಒಂದೆಡೆ ಸೇರಿ ಗಣಪತಿ ವಿಸರ್ಜನೆ ಮಾಡುತ್ತೇವೆ. ಇತರ ಸಮುದಾಯದವರೂ ನಮ್ಮೊಂದಿಗೆ ಪಾಲ್ಗೊಳ್ಳುತ್ತಾರೆ ಎಂದು ಸಿಂಪಿ ಸಮುದಾಯದ ಯುವಕ ರಾಕೇಶ ವಾವಳ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಉಪಜೀವನಕ್ಕಾಗಿ ನಗರ ಪ್ರದೇಶಗಳಲ್ಲಿ ವಾಸವಿದ್ದರೂ, ತವರು ಗ್ರಾಮದ ಪದ್ಧತಿ ಹಾಗೂ ಪರಂಪರೆ ಮುಂದುವರಿಸಿಕೊಂಡು ಸಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಪ್ರತಿವರ್ಷ ಇವರ ಮಣ್ಣಿನ ಗಣಪತಿ ನೋಡುವುದೇ ಖುಷಿಯ.

ಎಸ್.ಎಸ್. ಸುರೇಗಾಂವಕರ, ಕಲಾ ಶಿಕ್ಷಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧವೇಕೆ
ಗಜಮುಖನ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು!