ಹುಬ್ಬಳ್ಳಿ:
ಗಜಮುಖ ಗಣೇಶನನ್ನು ಸ್ವಾಗತಿಸಲು ಹುಬ್ಬಳ್ಳಿ ನಗರ ಹಾಗೂ ತಾಲೂಕು ಸಜ್ಜಾಗಿದ್ದು, ಬೀದಿ-ಬೀದಿಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರದ ವಿವಿಧೆಡೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬೃಹತ್ ಪೆಂಡಾಲ್‌ಗಳು ತಲೆ ಎತ್ತಿದ್ದು, ಅಲಂಕಾರ ಕಾರ್ಯ ಭರದಿಂದ ಸಾಗಿದೆ.ಒಬ್ಬರಿಗಿಂತ ಮತ್ತೊಬ್ಬರು ವಿಭಿನ್ನ ಮಂಟಪ ನಿರ್ಮಿಸುತ್ತಿದ್ದು, ಪೌರಾಣಿಕ ಹಾಗೂ ಸಾಮಾಜಿಕ ಸಂದೇಶ ಸಾರುವ ಮಾದರಿಗಳಿಗೆ ರೂಪ ನೀಡಲಾಗುತ್ತಿದೆ. ಹೂವು, ಹಣ್ಣು, ತಳಿರು-ತೋರಣ, ವಿದ್ಯುತ್ ದೀಪಾಲಂಕಾರ ಸೇರಿದಂತೆ ವಿವಿಧ ಅಲಂಕಾರಗಳಿಂದ ಮಂಟಪಗಳು ಕಂಗೊಳಿಸಲಿವೆ.
900ಕ್ಕೂ ಅಧಿಕ ಸಾರ್ವಜನಿಕ ಗಣಪ:ಹುಬ್ಬಳ್ಳಿ ನಗರದಲ್ಲಿ 900ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುವ ನಿರೀಕ್ಷೆಯಿದೆ. ಮಹಾನಗರ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಅಧಿಕ ಮನೆಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. 3, 5, 7, 9 ಹಾಗೂ ಈ ಬಾರಿ 11 ದಿನದ ಬದಲಿಗೆ 12 ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ಬಳಿಕ ವಿಸರ್ಜಿಸಲಾಗುತ್ತದೆ.
ಮ್ಯಾದಾರ ಓಣಿಯ ಸಪ್ತ ಸಾಮ್ರಾಟ್, ಮರಾಠ ಗಲ್ಲಿಯ ಹುಬ್ಬಳ್ಳಿ ಕಾ ಮಹಾರಾಜ್, ದಾಜಿಬಾನ್‌ಪೇಟೆಯ ಹುಬ್ಬಳ್ಳಿ ಕಾ ರಾಜಾ, ಗಣೇಶಪೇಟೆ ಕಾ ರಾಜಾ ಸೇರಿದಂತೆ ವಿವಿಧ ಹೆಸರಿನ ಸಾರ್ವಜನಿಕ ಗಣಪತಿಗಳು ಈ ಬಾರಿ ಗಮನ ಸೆಳೆಯುತ್ತಿವೆ. 15ರಿಂದ 25 ಅಡಿ ಎತ್ತರದ ಬೃಹತ್ ಮೂರ್ತಿಗಳನ್ನು ಈಗಾಗಲೇ ಮಂಟಪಗಳಿಗೆ ತರಲಾಗಿದೆ.
ಮಾರುಕಟ್ಟೆಯಲ್ಲಿ ಖರೀದಿ ಜೋರು:
ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ತರಹೇವಾರಿ ಅಲಂಕಾರಿಕ ಸಾಮಗ್ರಿಗಳು, ವಿದ್ಯುತ್ ದೀಪ, ಪ್ಲಾಸ್ಟಿಕ್ ಹಾರ, ಬಟ್ಟೆ ಹಾಗೂ ಕಟ್ಟಿಗೆಯ ಮಂಟಪಗಳಿಗೆ ಬೇಡಿಕೆ ಹೆಚ್ಚಿದೆ. ಹಣ್ಣು, ಬಾಳೆಕಂಬ, ತಳಿರು-ತೋರಣಗಳ ಖರೀದಿಯೂ ಹೆಚ್ಚಿದ್ದು, ಪೇಟೆಗಳಿಗೆ ಹಬ್ಬದ ಕಳೆ ಬಂದಿದೆ.ಗಣಪತಿ ಪೂಜೆಗೆ ಬಳಸುವ ಹಣ್ಣು, ಹೂವು, ಕಿರಾಣಿ ಸಾಮಗ್ರಿ, ಕಬ್ಬು, ಬಾಳೆಕಂದು, ತೆಂಗಿನಕಾಯಿ, ದೀಪದ ಎಣ್ಣೆ ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಮನೆಗಳಲ್ಲಿ ಪೂಜೆಗೆ ಸಿದ್ಧತೆ ಜೋರಾಗಿದ್ದು, ಮಾರುಕಟ್ಟೆಗಳಲ್ಲೂ ಖರೀದಿ ಭರಾಟೆ ಕಾಣುತ್ತಿದೆ. ಬೆಲೆ ಏರಿಕೆಯ ಬಿಸಿ ತಟ್ಟಿದ್ದರೂ, ಭಕ್ತಿಯ ಉತ್ಸಾಹ ಮಾತ್ರ ಕುಗ್ಗಿಲ್ಲ ಎಂಬುದು ಭಾನುವಾರ ಮಾರುಕಟ್ಟೆಯಲ್ಲಿ ಕಂಡುಬಂದ ದೃಶ್ಯ.