ಕಳೆದ ಮೂರೂವರೆ ವರ್ಷಗಳಿಂದ ಗಣೇಶೋತ್ಸವ ಸೇರಿದಂತೆ ಹಿಂದೂಗಳ ಹಬ್ಬ-ಹರಿದಿನಗಳು ಬಂದಾಗಲೆಲ್ಲ ಒಂದಲ್ಲೊಂದು ಅಡ್ಡಿ, ನಿರ್ಬಂಧ ಹಾಗೂ ಬೆದರಿಕೆ ಎದುರಾಗುತ್ತಿದೆ.

ಹುಬ್ಬಳ್ಳಿ:

ರಾಜ್ಯದಲ್ಲಿ ಮಸೀದಿಗಳ ಮುಂದೆ ಗಣೇಶನ ಮೆರವಣಿಗೆ ಹೋಗಬಾರದು ಎಂದು ಶಾಸನ ಬರೆಯಲಾಗಿದೆಯೇ?. ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ವಿಧಿಸುವ ಅಧಿಕಾರವನ್ನು ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟವರು ಯಾರು? ಎಂದು ಬಿಜೆಪಿ ಯುವ ಮುಖಂಡ ವೆಂಕಟೇಶ ಕಾಟವೆ ಪ್ರಶ್ನಿಸಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಟಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಹಿಂದೂ ಯುವಕರಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ ಎನ್ನುವುದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿಗೆ ಮತ್ತೊಂದು ಸಾಕ್ಷಿ ಎಂದು ಆರೋಪಿಸಿದರು.

ಕಳೆದ ಮೂರೂವರೆ ವರ್ಷಗಳಿಂದ ಗಣೇಶೋತ್ಸವ ಸೇರಿದಂತೆ ಹಿಂದೂಗಳ ಹಬ್ಬ-ಹರಿದಿನಗಳು ಬಂದಾಗಲೆಲ್ಲ ಒಂದಲ್ಲೊಂದು ಅಡ್ಡಿ, ನಿರ್ಬಂಧ ಹಾಗೂ ಬೆದರಿಕೆ ಎದುರಾಗುತ್ತಿದೆ. ಹಿಂದೂಗಳು ತಮ್ಮ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲೂ ಅನುಮತಿ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ತುಷ್ಟೀಕರಣದ ರಾಜಕಾರಣಕ್ಕೆ ಯಾವುದೇ ಮಿತಿ ಇಲ್ಲ ಎಂದು ಟೀಕಿಸಿದರು.

ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಒಂದು ಸಮುದಾಯಕ್ಕೆ ಒಂದು ಕಾನೂನು, ಮತ್ತೊಂದು ಸಮುದಾಯಕ್ಕೆ ಮತ್ತೊಂದು ಕಾನೂನು ಎಂಬ ಮನಸ್ಥಿತಿಯನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಗಣೇಶೋತ್ಸವ ಹಿಂದೂಗಳ ಭಕ್ತಿ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿದ್ದು, ಅದನ್ನು ಹತ್ತಿಕ್ಕುವ ಯಾವುದೇ ಪ್ರಯತ್ನದ ವಿರುದ್ಧ ಹಿಂದೂ ಸಮಾಜ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಿರಂತರವಾಗಿ ಧ್ವನಿ ಎತ್ತಲಿದ್ದಾರೆ ಎಂದರು.

ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿ, ತುಷ್ಟೀಕರಣದ ಮೂಲಕ ರಾಜಕೀಯ ಲಾಭ ಪಡೆಯಬಹುದು ಎಂದು ಕಾಂಗ್ರೆಸ್ ಸರ್ಕಾರ ಭಾವಿಸಿದ್ದರೆ ಅದು ದೊಡ್ಡ ಭ್ರಮೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ‘ಇದು ಕರ್ನಾಟಕದ ಆಡಳಿತವೋ ಅಥವಾ ಪಾಕಿಸ್ತಾನದ ಆಡಳಿತವೋ’ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ವೆಂಕಟೇಶ ಕಾಟವೆ ಆಕ್ರೋಶ ವ್ಯಕ್ತಪಡಿಸಿದರು.