- -ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕುಸುಬೂರು, ಕೆ.ಕಣಬೂರು ಕಾಲೋನಿ,ದೊಡ್ಡಿನತಲೆ, ಸಾತ್ಕೋಳಿ ಗ್ರಾಮಗಳ ನೂರಾರು ಜನರ ಆತಂಕ
ಮುತ್ತಿನಕೊಪ್ಪದಿಂದ - ಕೆ.ಕಣಬೂರು ಕಾಲೋನಿ,ಕುಸುಬೂರು, ದೊಡ್ಡಿನತಲೆ, ಸಾತ್ಕೋಳಿ ಸಂಪರ್ಕಿಸುವ ಕೆ.ಕಣಬೂರು ಕಾಲೋನಿ ಸೇತುವೆ ಕುಸಿಯುತ್ತಿದ್ದು ನೂರಾರು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಮುತ್ತಿನಕೊಪ್ಪದಿಂದ ಅಂದಾಜು 3 ಕಿ.ಮೀ. ದೂರದ ಕೆ.ಕಣಬೂರು ಕಾಲೋನಿಯಲ್ಲಿ ಮುಖ್ಯರಸ್ತೆಯಲ್ಲಿನ ಕರಿ ಬಸವನ ಹಳ್ಳಕ್ಕೆ ಭದ್ರಾ ಡ್ಯಾಂ ಕಟ್ಟಿದ ನಂತರ ರೈತರ ಪುನರ್ವಸತಿಗೆ 60 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಭದ್ರಾ ಮೇಲ್ದಂಡೆ ಯೋಜನೆಗೆ ದೊಡ್ಡ, ದೊಡ್ಡ ವಾಹನಗಳು ಈ ಸೇತುವೆ ಮೇಲೆ ಓಡಾಡುವುದರಿಂದ ಕಾಲ ಕ್ರಮೇಣ ಈ ಸೇತುವೆ ಶಿಥಿಲಾವಸ್ಥೆ ತಲುಪಿದೆ.ಸೇತುವೆ ಎರಡು ಭಾಗದ ಕೈಪಿಡಿಗಳು ಬಿದ್ದಿದೆ. ಒಂದು ಭಾಗದ ಸಿಮೆಂಟ್, ಕಲ್ಲುಗಳು ಹಳ್ಳಕ್ಕೆ ಜರಿಯುತ್ತಿದೆ. ಸಾತ್ಕೋಳಿ, ದೊಡ್ಡಿನತಲೆ, ಕುಸುಬೂರು ಹಾಗೂ ಕೆ.ಕಣಬೂರಿನಿಂದ ಮುತ್ತಿನಕೊಪ್ಪಕ್ಕೆ ಇದೇ ಸೇತುವೆ ಮೇಲೆ ಹೋಗಬೇಕಾಗಿದೆ.ಶಾಲಾ ಮಕ್ಕಳು ಇದನ್ನೆ ಬಳಸಬೇಕಿದೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಸೇತುವೆ ಕುಸಿಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಬಳಸಿ ಬರುವ ಮಾರ್ಗವೂ ಸರಿಯಿಲ್ಲ
-- ಬಾಕ್ಸ್
ಹೊಸ ಸೇತುವೆಗೆ ಗ್ರಾಮಸ್ಥರು ಸರ್ಕಾರಕ್ಕೆ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಟಿ.ಡಿ.ರಾಜೇಗೌಡ ಈ ಹೊಸ ಸೇತುವೆಗೆ ₹2.80 ಕೋಟಿ ಮಂಜೂರು ಮಾಡಿಸಿದ್ದಾರೆ. ಹೊಸ ಸೇತುವೆ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ. ಹಳೇ ಸೇತುವೆ ಪಕ್ಕದಲ್ಲಿ ಹೊಸ ಸೇತುವೆಗೆ ಫೌಂಡೇಷನ್ ಕಾಮಗಾರಿ ಪ್ರಾರಂಭವಾಗಿದೆ. ಆದರೆ, ಹೊಸ ಸೇತುವೆ ನಿರ್ಮಾಣಕ್ಕೂ ಮುನ್ನವೇ ಹಳೇ ಸೇತುವೆ ಕೊಚ್ಚಿ ಹೋಗುವುದೋ ಎಂಬ ಆತಂಕ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.