ಹಿರೇಕೆರೂರು: ಕಂಪನಿಗಳು ತಮಗೆ ಬಂದ ಲಾಭಾಂಶವನ್ನು ಸಾಮಾಜಿಕ ಕಳಕಳಿ ಹಾಗೂ ಶಾಲಾ ಕಾಲೇಜು, ಆಸ್ಪತ್ರೆ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಧನ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಬೆಂಗಳೂರಿನ ಹುವಾಯಿ ಟೆಕ್ನಾಲಜಿ ಕಂಪನಿಯ ಉಪಾಧ್ಯಕ್ಷ ಸತೀಶ ಹಂಪಾಳಿ ಹೇಳಿದರು.ಪಟ್ಟಣದ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುವಾಯಿ ಟೆಕ್ನಾಲಜಿ ಕಂಪನಿ ಇವರ ಅನುದಾನದಡಿ ಆಹ್ವಾನ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಅಂದಾಜು ರು.50 ಲಕ್ಷ ವೆಚ್ಚದಲ್ಲಿ ಶಾಲೆಯ ಪುನರುಜ್ಜೀವನ, ಆವರಣ ಗೋಡೆ ಹಾಗೂ 2 ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಖಾಸಗಿ ಅಥವಾ ಕನ್ನಡ ಶಾಲೆಗಳಾಗಲಿ ಕೇವಲ ಉತ್ತಮವಾದ ಮೂಲಭೂತ ಸೌಕರ್ಯಗಳಿಂದಲೇ ಶಿಕ್ಷಣ ಗುಣಮಟ್ಟದಾಗಿದೆ ಎಂಬುದು ಸುಳ್ಳು. ಶಿಕ್ಷಕರು ಮತ್ತು ಮಕ್ಕಳ ನಡುವಿನ ಸಂಬಂಧಗಳು ಹಾಗೂ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಶಿಕ್ಷಕರು ತಿಳಿ ಹೇಳುವ ಪಠ್ಯಕ್ರಮಗಳ ಮೇಲೆ ವಿದ್ಯಾರ್ಥಿಯ ಭವಿಷ್ಯದ ಜೀವನ ಮುಂದುವರೆಯುತ್ತದೆ. ಕಳೆದ 40 ವರ್ಷಗಳ ಹಿಂದೆ ನಾನು ಓದಿದ ಈ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬುದು ಬಹು ದಿನದ ಆಸೆಯಾಗಿತ್ತು. ಅದು ಕೂಡಿ ಬಂದಿದೆ ಮುಂದಿನ ದಿನಮಾನಗಳಲ್ಲಿ ಶಾಲೆಯ ಡಿಜೀಟಲಿಕರಣಕ್ಕೆ ಪ್ರಯತ್ನಿಸಿ ಶಾಲೆಯ ಅಭಿವೃದ್ಧಿಗೆ ಕೈಜೋಡೊಸುತ್ತೇನೆ ಎಂದರು. ಆಹ್ವಾನ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಜಾಕಿಶೋರ ಪ್ರಧಾನ ಮಾತನಾಡಿ, ನಮ್ಮ ಫೌಂಡೇಶನ್ ವತಿಯಿಂದ ಭಾರತಾದ್ಯಾಂತ ಇದುವರೆಗೂ 1301 ಶಾಲಾ ಕಾಲೇಜು, ಆಸ್ಪತ್ರೆಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಹತ್ವ ಕೊಟ್ಟು ಮೂಲಭೂತ ಸೌಕರ್ಯಗಳ ಬಗ್ಗೆ ಅತೀವ ಕಾಳಜಿ ವಹಿಸುತ್ತಿದೆ ಎಂದರು. ಶಿಕ್ಷಣಾಧಿಕಾರಿ ಶ್ರೀಧರ ಮಾತನಾಡಿ, ಶಾಲೆ ನಮಗೆ ಸಂಸ್ಕಾರ, ಶಿಕ್ಷಣ, ಸಂಪತ್ತು, ಆರೋಗ್ಯವನ್ನು ಕೊಡುತ್ತದೆ. ಶಾಲೆಗಳು ಉತ್ತಮ ಪರಿಸರದಲ್ಲಿರಬೇಕು, ಸರ್ಕಾರಿ ಶಾಲೆಗಳು ಸುಸ್ಥಿತಿಯಲ್ಲಿರಲು ಕೇವಲ ಸರ್ಕಾರದೊಂದಿಗೆ ಸಮುದಾಯದ ಸಹಭಾಗಿತ್ವ ಅವಶ್ಯಕವಾಗಿದೆ.
ತಾವು ಕಲಿತ ಶಾಲೆಗೆ ಕೊಡುಗೆ ನೀಡಲು ಇತ್ತೀಚಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳು ಅತೀ ಉತ್ಸುಕರಾಗಿದ್ದು ಅವರಿಗಾಗಿ ಸರ್ಕಾರ ಪೋರ್ಟಲ್ ಒಂದನ್ನು ತೆರೆದಿದ್ದು ಆಯಾ ಶಾಲೆಗಳ ಅಭಿವೃದ್ದಿಗೆ ಬೇಕಾಗುವ ಧನ ಸಹಾಯವನ್ನು ಈ ಪೋರ್ಟಲನಿಂದಲೇ ಮಾಡಲು ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಬಾದಾಮಿ ಅಧ್ಯಕ್ಷತೆ ವಹಿಸಿದ್ದರು. ಪಪಂ. ಅಧ್ಯಕ್ಷೆ ಸುಧಾ ಚಿಂದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ವೇತಾ ಮಾರವಳ್ಳಿ, ಸದಸ್ಯ ಸತೀಶ ಕೋರಿಗೌಡ್ರ, ಶಾಲೆಯ 1971-72 ನೇ ಸಾಲಿನ ಗೆಳೆಯರ ಬಳಗದ ಮಹೇಶ ಮಡಿವಾಳರ, ಮಹೇಶ ನಾಡಿಗೇರ, ವಿನಾಯಕ ಟಿ, ರವಿ ಚಿಂದಿ, ರಾಮು ಮುರ್ಡೇಶ್ವರ, ವೆಂಕಟೇಶ ಉಪ್ಪಾರ, ರಾಜು ಜವಳಿ, ವಿಜಯಕುಮಾರ ಹಳಕಟ್ಟಿ, ಕುಮಾರ ಅರ್ಕಾಚಾರಿ, ಇಂಜನೀಯರ ಲೋಕೇಶ, ಗೌರಿ ಹಂಪಾಳಿ, ಮೋನಿಷಾ, ಸೇರಿದಂತೆ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿದ್ದರು. ಶಾಲೆ ಹಾಗೂ ಗೆಳೆಯರ ಬಳಗದಿಂದ ಸತೀಶ ಹಂಪಾಳಿಯವರನ್ನ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಎಂ.ವಿ.ಕಮ್ಮಾರ ಪ್ರಸ್ತಾವಿಕವಾಗಿ ಮಾತನಾಡಿದರು, ಎನ್.ಎಸ್.ಬಣಕಾರ ಸ್ವಾಗತಿಸಿದರು. ಎಂ.ವೈ. ದಾಳಿ ನಿರೂಪಿಸಿ ವಂದಿಸಿದರು.