ಶಿವಾನಂದ ಗೊಂಬಿ ಹುಬ್ಬಳ್ಳಿ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿಯಿಂದ ಮುನಿಸಿಕೊಂಡು ಶೆಟ್ಟರ್ ಕಾಂಗ್ರೆಸ್ ಸೇರಿದ್ದರು. ಇದರಿಂದ ಪ್ರಬಲ ಲಿಂಗಾಯತ ಸಮುದಾಯದ ಪ್ರಮುಖ ಲೀಡರ್‌ರೊಬ್ಬರು ಪಕ್ಷಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ಹರ್ಷಗೊಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್ ಸೋತರು. ಹೀಗಾಗಿ ಶೆಟ್ಟರ್ ಪರಾಭವಗೊಂಡಿದ್ದರೂ ಅವರಿಗೆ ವಿಧಾನಪರಿಷತ್ ಸದಸ್ಯತ್ವ ನೀಡಿತ್ತು.
ಇದೀಗ ಶೆಟ್ಟರ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾತೃ ಪಕ್ಷಕ್ಕೆ ಮರಳಿದ್ದಾರೆ. ಇದರಿಂದ ಪರಿಷತ್‌ನಲ್ಲಿ ಒಂದು ಸ್ಥಾನ ತೆರವಾದಂತಾಗಿದೆ. ಈ ಸ್ಥಾನವನ್ನು ಧಾರವಾಡ ಜಿಲ್ಲೆಗೆ ಕೊಡಬೇಕು ಎಂಬ ಬೇಡಿಕೆ ಕೈ ಮುಖಂಡರದ್ದು. ಹೀಗಾಗಿ ಸಹಜವಾಗಿ ಪೈಪೋಟಿ ಜಾಸ್ತಿಯಾಗುತ್ತಿದೆ.ಪೈಪೋಟಿ ಜಾಸ್ತಿ: ಶೆಟ್ಟರ್ ಕಾಂಗ್ರೆಸ್‌ಗೆ ಬಂದಿರುವುದರಿಂದ ಲಿಂಗಾಯತರ ಬೆಂಬಲ ದೊರೆತ್ತಿತ್ತು. ಹೀಗಾಗಿ ಪರಿಷತ್ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ಕೊಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ಒಂದು ಬಣ ಇಟ್ಟಿದೆ. ಇದಕ್ಕಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಅನಿಲಕುಮಾರ ಪಾಟೀಲ, ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.
ಇನ್ನು ಕಳೆದ ಬಾರಿ ನವಲಗುಂದ ಕ್ಷೇತ್ರದಲ್ಲಿ ಚುನಾವಣೆಗೆ ಸಂಪೂರ್ಣ ಸಿದ್ಧತೆ ನಡೆಸಿದ್ದ ವಿನೋದ ಅಸೂಟಿಗೆ ಟಿಕೆಟ್ ತಪ್ಪಿತು. ಜೆಡಿಎಸ್‌ನಿಂದ ಬಂದಿದ್ದ ಎನ್.ಎಚ್. ಕೋನರಡ್ಡಿಗೆ ಟಿಕೆಟ್ ಲಭಿಸಿತು. ಹೀಗಾಗಿ ಆಗ ಕ್ಷೇತ್ರ ತ್ಯಾಗ ಮಾಡಿದ್ದ ವಿನೋದ ಅಸೂಟಿಗೆ ಪರಿಷತ್ ಸ್ಥಾನ ನೀಡಬೇಕು. ಇದರಿಂದ ಯುವಕರಿಗೆ ಆದ್ಯತೆ ನೀಡಿದಂತಾಗುತ್ತದೆ. ಜತೆಗೆ ಉತ್ತಮ ಸಂಘಟನಾಕಾರನಾಗಿರುವ, ಕುರುಬ ಸಮಾಜಕ್ಕೆ ಸೇರಿರುವ ಅಸೂಟಿಗೆ ಕೊಡುವುದರಿಂದ ಪಕ್ಷಕ್ಕೂ ಹೆಚ್ಚು ಅನುಕೂಲವಾಗಲಿದೆ ಎಂಬ ಬೇಡಿಕೆ ಮತ್ತೊಂದು ಬಣ ಮುಂದೆ ಇಟ್ಟಿದೆ.
ಒಟ್ಟಿನಲ್ಲಿ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಈಗಲೇ ಪೈಪೋಟಿಯಂತೂ ಶುರುವಾಗಿದೆ. ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ!